ಇಂದಿನಿಂದ ರಾಹುಲ್ ಗಾಂಧಿ ಜಮ್ಮು ಪ್ರವಾಸ; ಕಾಲ್ನಡಿಗೆಯಲ್ಲೇ ಮಾತಾ ವೈಷ್ಣೋ ದೇವಿ ದರ್ಶನ..!

ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇಂದು ಜಮ್ಮುವಿಗೆ ತೆರಳಿದ್ದು, ಅಲ್ಲಿನ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇಗುಲ (Mata Vishno Devi Temple)ಕ್ಕೆ ಕಾಲ್ನಡಿಗೆಯಲ್ಲೇ ಹೋಗಲಿದ್ದಾರೆ. ಅವರಿಂದು ಮಧ್ಯಾಹ್ನ 12ಗಂಟೆ ಹೊತ್ತಿಗೆ ಜಮ್ಮು ತಲುಪಿ ಅಲ್ಲಿಂದ ದೇಗುಲಕ್ಕೆ ಹೋಗಲಿದ್ದಾರೆ. ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದ ಬಳಿಕ ಮಂದಿರದ ಆವರಣದಲ್ಲೇ ಇಂದು ತಂಗಲಿದ್ದಾರೆ.
ರಾಹುಲ್ ಗಾಂಧಿಯವರ ಜಮ್ಮು ಭೇಟಿಯ ಬಗ್ಗೆ ಎಎನ್ಐಗೆ ಮಾಹಿತಿ ನೀಡಿದ ಜಮ್ಮು-ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುಲಾಂ ಅಹ್ಮದ್ ಮಿರ್, 'ವಯಾನಾಡಿನ ಸಂಸದ ರಾಹುಲ್ ಗಾಂಧಿಯವರು ಮಾತಾ ವೈಷ್ಣೋ ದೇವಿಯಲ್ಲಿ ತುಂಬ ನಂಬಿಕೆ ಇಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ, ರಾಜಕೀಯ ಬೆಳವಣಿಗೆಗಳು, ಇತರ ಕೆಲಸಗಳ ಕಾರಣದಿಂದ ಅವರಿಗೆ ದೇವಸ್ಥಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ನಾವೂ ಅವರನ್ನು ಜಮ್ಮುವಿಗೆ ಬರುವಂತೆ ಕೇಳಿಕೊಳ್ಳುತ್ತಲೇ ಇದ್ದೆವು. ಆದರೆ ಈಗ ಆ ಕಾಲ ಕೂಡಿಬಂದಿದೆ. ರಾಹುಲ್ ಗಾಂಧಿ ಕಳೆದ ತಿಂಗಳು ಶ್ರೀನಗರಕ್ಕೆ ಭೇಟಿಕೊಟ್ಟಿದ್ದರು. ಹಾಗೇ, ಸೆಪ್ಟೆಂಬರ್ 9 ಮತ್ತು 10 ರಂದು ಜಮ್ಮು ಪ್ರವಾಸ ಹಮ್ಮಿಕೊಂಡಿದ್ದಾರೆ' ಎಂದು ತಿಳಿಸಿದ್ದಾರೆ.
'ಹಲವು ಪ್ರಮುಖ ನಾಯಕರು ಈ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಬರುತ್ತಾರೆ. ಅದರಲ್ಲಿ ಬಹುತೇಕರು ಚಾಪರ್ ಅಥವಾ ಕುದುರೆಯ ಮೂಲಕ ದೇಗುಲಕ್ಕೆ ಹೋಗುತ್ತಾರೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾತ್ರಾದಿಂದ ನಡೆದುಕೊಂಡೇ ದೇಗುಲಕ್ಕೆ ಹೋಗಲಿದ್ದಾರೆ. ಹಾಗೇ ಮರುದಿನ ಅಂದರೆ ಸೆಪ್ಟೆಂಬರ್ 10ರಂದು ಕಾಲ್ನಡಿಗೆಯಲ್ಲೇ ದೇಗುಲದಿಂದ ವಾಪಸ್ ಬರಲಿದ್ದಾರೆ' ಎಂದು ಮಿರ್ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೇರಳದಿಂದ ಬೆಳಗ್ಗೆ ಕಾರಿನಲ್ಲೇ ಜಮ್ಮುವಿಗೆ ಹೋಗಲಿದ್ದಾರೆ. ಕತ್ರಾವರೆಗೆ ತೆರಳಿ ಅಲ್ಲಿಂದ ಕಾಲ್ನಡಿಗೆಯಲ್ಲಿ ಮಾತಾ ವೈಷ್ಣೋದೇವಿ ದೇಗುಲ ಇರುವ ಬೆಟ್ಟಕ್ಕೆ ಹೋಗಲಿದ್ದಾರೆ. ನಾಳೆ ಸೆಪ್ಟೆಂಬರ್ 10ರಂದು ಬೆಳಗ್ಗೆ 11.30ಕ್ಕೆ ಕಾಂಗ್ರೆಸ್ ಕಾರ್ಯಕರ್ತರೊಟ್ಟಿಗೆ ಸಂವಾದ ನಡೆಸಲಿದ್ದಾರೆ. ಅಲ್ಲಿಂದ ರಾಹುಲ್ ಗಾಂಧಿ ಲಡಾಕ್ಗೆ ಹೋಗಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಮೇಲೆ ಆಗಸ್ಟ್ 9ರಂದು ಶ್ರೀನಗರಕ್ಕೆ ಭೇಟಿ ನೀಡಿ, ಅಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿದ್ದರು. ಹಾಗೇ ಲಡಾಖ್ನ ಖೀರ್ ಭವಾನಿ ದೇಗುಲ ಮತ್ತು ಹಜರತ್ ದರ್ಗಾ ಶರೀಫ್ಗೆ ಭೇಟಿ ನೀಡಿದ್ದರು.
Post navigation
ದೇಶವಿರೋಧಿ' ಉಪನ್ಯಾಸ, ಟೀಕೆಗಳು ಬೇಡ: ಕೇರಳದ ಸೆಂಟ್ರಲ್ ಯುನಿವರ್ಸಿಟಿ ಸೂಚನೆ!