ಹೊಸಪೇಟೆ ಆಯಿತು ಈಗ ಬಳ್ಳಾರಿಯಲ್ಲಿ ಅಪ್ಪು ದೊಡ್ಡ ಪ್ರತಿಮೆ, ಕೆರೆಗೂ ಪುನೀತ್ ಹೆಸರು!
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೀವಂತವಾಗಿದ್ದ ಹಲವಾರು ಒಳ್ಳೆಯ ಕೆಲಸಗಳು ಹಾಗೂ ಮಾಡಿದ್ದ ಅದೆಷ್ಟೋ ಸಹಾಯಗಳು ಅಪ್ಪು ನಿಧನದ ನಂತರ ಆಚೆಗೆ ಬಂದವು. ಇಷ್ಟೆಲ್ಲಾ ಸಹಾಯ ಮಾಡಿ ಎಲ್ಲಿಯೂ ಸಹ ಪ್ರಚಾರ ತೆಗೆದುಕೊಳ್ಳದೇ ತಾನಾಯಿತು, ತನ್ನ ಪಾಡಾಯಿತು ಎಂದು ಬದುಕಿದ್ದ ರಾಜಕುಮಾರನ ಗುಣಕ್ಕೆ ಕನ್ನಡಿಗರು ಸೋತು ಹೋದರು.
ಪುನೀತ್ ಮರಣ ಹೊಂದಿದ ನಂತರ ರಾಜ್ಯದ ವಿವಿಧ ಊರುಗಳ ವಿವಿಧ ರಸ್ತೆಗಳಿಗೆ, ವೃತ್ತಗಳಿಗೆ, ಬಸ್ ನಿಲ್ದಾಣಗಳಿಗೆ ಹಾಗೂ ಪಾರ್ಕ್ಗಳಿಗೆ ಸೇರಿದಂತೆ ಹಲವಾರು ಸಾರ್ವಜನಿಕ ಸ್ಥಳಗಳಿಗೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಲಾಯಿತು. ಇನ್ನು ಕೇವಲ ರಾಜ್ಯ ಮಾತ್ರವಲ್ಲದೇ ದೇಶದಿಂದ ಆಚೆಗೂ ಸಹ ಪುನೀತ್ ಮೇಲಿನ ಪ್ರೀತಿ ಎಂಥದ್ದು ಎಂಬುದು ಸಾಬೀತಾಗಿತ್ತು. ಆಸ್ಟ್ರೇಲಿಯಾದ ಸಿಡ್ನಿ ನಗರದ ಪಾರ್ಕ್ ಒಂದಕ್ಕೆ ನಟ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಲಾಗಿತ್ತು.
ಹೀಗೆ ದೇಶ ಭಾಷೆಗಳೆನ್ನದೇ ಪುನೀತ್ ರಾಜ್ಕುಮಾರ್ ಮೇಲಿನ ಪ್ರೀತಿಯನ್ನು ಜನರು ವ್ಯಕ್ತಪಡಿಸುತ್ತಿದ್ದು, ರಾಜ್ಯದ ಹಲವೆಡೆ ಪುತ್ಥಳಿಗೂ ಸಹ ನಿರ್ಮಾಣಗೊಂಡವು. ಅದರಲ್ಲಿಯೂ ಹೊಸಪೇಟೆ ನಗರದಲ್ಲಿ ಪುನೀತ್ ರಾಜ್ಕುಮಾರ್ ಅವರ ಬೃಹತ್ ಕಟ್ಟಡವನ್ನು ನಿಲ್ಲಿಸಿ ದೊಡ್ಡ ಕಾರ್ಯಕ್ರಮ ನಡೆಸಿ ಪುತ್ಥಳಿಯನ್ನು ಅನಾವರಣಗೊಳಿಸಲಾಗಿತ್ತು. ಇದೀಗ ಅದೇ ರೀತಿ ಬಳ್ಳಾರಿಯಲ್ಲಿಯೂ ಸಹ ಪುನೀತ್ ರಾಜ್ಕುಮಾರ್ ಅವರ ಬೃಹತ್ ಪುತ್ಥಳಿ ನಿಲ್ಲಿಸಲು ತೀರ್ಮಾನಿಸಲಾಗಿದ್ದು, ಪುನೀತ್ ಇಷ್ಟಪಡುವವರಿಗೆ ಇದು ಸಂತಸದ ಹಾಗೂ ಹೆಮ್ಮೆಯ ಸುದ್ದಿಯಾಗಿದೆ.
ರಾಜ್ಯದಲ್ಲೇ ಅತಿದೊಡ್ಡ ಪ್ರತಿಮೆಬಳ್ಳಾರಿಯ ನಲ್ಲಚರಾವು ಪ್ರದೇಶದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಮುಂದೆ ಈ ಪ್ರತಿಮೆಯನ್ನು ಸ್ಥಾಪಿಸಲಾಗಲಿದ್ದು, ಇದೇ ತಿಂಗಳ 21ರಂದು ಲೋಕಾರ್ಪಣೆಗೊಳ್ಳಲಿದೆ. ಇನ್ನು ರಾಜ್ಯದಲ್ಲಿ ಇಲ್ಲಿಯವರೆಗೂ ಸ್ಥಾಪಿಸಿರುವ ಪುನೀತ್ ರಾಜ್ಕುಮಾರ್ ಪ್ರತಿಮೆಗಳ ಪೈಕಿ ಇದು ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ, ಈ ಪ್ರತಿಮೆ 23 ಅಡಿ ಎತ್ತರವಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ರಾಕಿ ಭಾಯ್ ಪ್ರತಿಮೆಯನ್ನು ನಿರ್ಮಿಸಿದ್ದ ಜೀವನ್ ಶಿಲ್ಲಿ ತಂಡ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ. 15 ಜನರ ತಂಡ ಸುಮಾರು ಐದು ತಿಂಗಳ ಸಮಯ ತೆಗೆದುಕೊಂಡು ಈ ಪ್ರತಿಮೆಯನ್ನು ತಯಾರಿಸಿದ್ದಾರೆ.
ಕೆರೆಗೂ ಅಪ್ಪು ಹೆಸರು
ಇನ್ನು ಜಿಲ್ಲಾ ಕ್ರೀಡಾಂಗಣದ ಮುಂದೆ 23 ಅಡಿಯ ಪ್ರತಿಮೆ ನಿಲ್ಲಿಸುವುದು ಮಾತ್ರವಲ್ಲದೇ ಕ್ರೀಡಾಂಗಣದ ಪಕ್ಕದಲ್ಲೇ ಇರುವ ಪಾರ್ಕ್ ಹಾಗೂ 14 ಎಕರೆಯ ವಿಶಾಲ ಕೆರೆಗೂ ಸಹ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. ಈ ವಿಷಯವನ್ನು ಹಾಗೂ ಕೆಲಸವನ್ನು ಆರಂಭದಿಂದ ಅಂತ್ಯದವರೆಗೂ ಉಸ್ತುವಾರಿ ತೆಗೆದುಕೊಂಡು ನೋಡಿಕೊಂಡ ಕೀರ್ತಿ ಶ್ರೀ ರಾಮುಲು ಅವರಿಗೆ ಸೇರಲಿದೆ.
ಕಾರ್ಯಕ್ರಮ ಯಾವಾಗ?
ಇನ್ನು ಪುನೀತ್ ರಾಜ್ಕುಮಾರ್ ಅವರ ಈ ಬೃಹತ್ ಪುತ್ಥಳಿ ಲೋಕಾರ್ಪಣೆ, ಪಾರ್ಕ್ಗೆ ಮತ್ತು ಕೆರೆಗೆ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡುವ ಕಾರ್ಯಕ್ರಮವನ್ನು ಜನವರಿ 21ರ ಶುಕ್ರವಾರ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರಾಮುಲು ಘೋಷಿಸಿದ್ದಾರೆ. ಪುನೀತ್ ರಾಜ್ಕುಮಾರ್ ಅಡ್ಡಾ ಎಂದೇ ಕರೆಯಲ್ಪಡುವ ಬಳ್ಳಾರಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ದಾಖಲೆಯ ಜನಸಾಗರ ಸೇರುವುದಂತೂ ಖಚಿತ.