ಬಳ್ಳಾರಿ: ಕಾರ್ಖಾನೆಗಳ ಧೂಳಿನಿಂದಾಗಿ ಇಡೀ ಸುಲ್ತಾನಪುರದ ಗ್ರಾಮಸ್ಥರ ಸ್ಥಳಾಂತರ?
ಬಳ್ಳಾರಿ: ವಿದ್ಯುತ್ ಉತ್ಪಾದನಾ ಸ್ಥಾವರ ಮತ್ತು ಇತರ ಗಣಿಗಾರಿಕೆ ಕಂಪನಿಗಳಿಂದ ಉತ್ಪತ್ತಿಯಾಗುವ ಧೂಳು ಹಳ್ಳಿಯ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲು ಆರಂಭಿಸಿದೆ. ಬಳ್ಳಾರಿಯ ಸುಲ್ತಾನ್ ಪುರ ಗ್ರಾಮದಲ್ಲಿ ಸುಮಾರು 3ಸಾವಿರಕ್ಕಿಂತ ಅಧಿಕ ಮಂದಿ ವಾಸಿಸುತ್ತಿದ್ದು ಧೂಳಿನ ಮಾಲಿನ್ಯದಿಂದ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ.
ಗ್ರಾಮಸ್ಥರ ದುಃಸ್ಥಿತಿ ನೋಡಿ, ಸ್ಥಳೀಯ ಆಡಳಿತವು ಇಡೀ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದೆ. ಆದರೆ ಗ್ರಾಮಸ್ಥರು ತಮ್ಮದೇ ಆದ ಕೆಲವು ಷರತ್ತುಗಳೊಂದಿಗೆ ಬೇರೆಡೆ ಶಿಫ್ಟ್ ಆಗಲು ಮನಸ್ಸು ಮಾಡಿದ್ದಾರೆ.
ಗ್ರಾಮಸ್ಥರು ಪದೇ ಪದೇ ಮನವಿ ಮಾಡಿದ ನಂತರ ಮೂರು ವರ್ಷಗಳ ನಂತರ ಸರ್ಕಾರ ಶಿಫ್ಟ್ ಮಾಡಲು ಒಪ್ಪಿಗೆ ನೀಡಿತ್ತು. ಆದರೆ ಸ್ಥಳಾಂತರದ ಬಗ್ಗೆ ಗ್ರಾಮಸ್ಥರಲ್ಲಿಯೇ ಒಗ್ಗಟ್ಟು ಇರಲಿಲ್ಲ ಎಂದು ಜಿಲ್ಲಾಡಳಿತ ಮನಗಂಡಿದೆ. ಸ್ಥಳಾಂತರವಾದ ನಂತರ ಸರ್ಕಾರ ತಾನು ಕೊಟ್ಟ ಭರವಸೆ ನೆರೆವೇರಿಸುವುದಿಲ್ಲ ಎಂದು ಗ್ರಾಮದ ಹಲವರು ಅನುಮಾನ ವ್ಯಕ್ತ ಪಡಿಸಿದ್ದರು ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ಇದೇ ರೀತಿ ಮತ್ತೊಂದು ಗ್ರಾಮದ ಸ್ಥಳಾಂತರ ಸರಾಗವಾಗಿ ನಡೆದಿರಲಿಲ್ಲ. ಹೀಗಾಗಿ, ಈ ಕ್ರಮ ಕೈಗೊಳ್ಳುವ ಮೊದಲು ಕರ್ನಾಟಕ ಸರ್ಕಾರದಿಂದ ಭರವಸೆ ನೀಡಬೇಕು ಎಂದು ಈ ಗ್ರಾಮದ ಸದಸ್ಯರು ಒತ್ತಾಯಿಸಿದ್ದಾರೆ.
ಬಳ್ಳಾರಿಯ 10 ಪ್ರಮುಖ ಗಣಿ ಕಂಪನಿಗಳಿಂದ ಸುತ್ತುವರಿದಿರುವ ಕಾರಣ ಇಡೀ ಗ್ರಾಮವನ್ನು ಸ್ಥಳಾಂತರಿಸುವ ಪರವಾಗಿ ಜಿಲ್ಲಾಡಳಿತ ನಿಂತಿದೆ. ಈ ಸ್ಥಳಗಳಲ್ಲಿ ಧೂಳಿನ ಮಾಲಿನ್ಯವು ತುಂಬಾ ಸಾಮಾನ್ಯವಾಗಿದೆ ಮತ್ತು ಸುಲ್ತಾನ್‌ಪುರದ ಹಳ್ಳಿಗಳಲ್ಲಿ ಮಾಲಿನ್ಯದಿಂದ ಹಲವಾರು ಕಾಯಿಲೆಗಳು ಉಂಟಾಗುತ್ತವೆ ಎಂದು ಆರೋಗ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದು ತಾವು ಹುಟ್ಟಿ ಬೆಳೆದ ಸ್ಥಳ ಹೀಗಾಗಿ ನಾವು ಎಲ್ಲಿಯೂ ಬರುವುದಿಲ್ಲ ಎಂದು ಗ್ರಾಮದ ಒಂದು ವರ್ಗ ಪಟ್ಟು ಹಿಡಿದಿದೆ. ಗ್ರಾಮದಲ್ಲಿ 2,500 ಜನಸಂಖ್ಯೆ ಇದೆ. ಹೆಚ್ಚುತ್ತಿರುವ ಮಾಲಿನ್ಯ ಸಮಸ್ಯೆಯಿಂದಾಗಿ ಜನರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಮತ್ತೊಬ್ಬ ನಿವಾಸಿ ತಿಳಿಸಿದ್ದಾರೆ.
ಕಾರ್ಖಾನೆಗಳು ಮತ್ತು ವಿದ್ಯುತ್ ಉತ್ಪಾದನಾ ಘಟಕಗಳು ಉತ್ತುಂಗದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ, ಕಾರುಗಳು, ಬಟ್ಟೆಗಳು ಮತ್ತು ಮನೆಗಳ ಮೇಲೆ ಧೂಳು ಆವರಿಸುತ್ತದೆ. ಇಲ್ಲಿಂದ ಸ್ಥಳಾಂತರಗೊಳ್ಳುವುದೊಂದೇ ಪರಿಹಾರವಾಗಿದೆ. ಎಲ್ಲಾ ಗ್ರಾಮಸ್ಥರನ್ನು ಒಪ್ಪಿಸಿ ಅವರಲ್ಲಿ ವಿಶ್ವಾಸ ಮೂಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಆಡಳಿತವನ್ನು ವಿನಂತಿಸುತ್ತೇವೆ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.
ಆಡಳಿತ ಮಂಡಳಿ ಇತ್ತೀಚೆಗೆ ಗ್ರಾಮಸ್ಥರೊಂದಿಗೆ ಸಭೆ ನಡೆಸಿದೆ. "ಸ್ಥಳಾಂತರಕ್ಕೆ ಗ್ರಾಮಸ್ಥರ ಒಪ್ಪಿಗೆಯೊಂದಿಗೆ ಸೂಕ್ತ ಸ್ಥಳವನ್ನು ಆಯ್ಕೆ ಮಾಡಲಾಗುವುದು, ಪುನರ್ವಸತಿ ಪ್ರಕ್ರಿಯೆಯಲ್ಲಿ ನೀಡಲಾಗುವ ಸವಲತ್ತುಗಳು ಮತ್ತು ಆರ್ಥಿಕ ನೆರವಿನ ಬಗ್ಗೆ ಗ್ರಾಮಸ್ಥರಿಗೆ ಭರವಸೆ ನೀಡಲಾಗಿದೆ. ಗ್ರಾಮಸ್ಥರ ಸ್ಥಳಾಂತರಕ್ಕೆ ಸರ್ಕಾರ ಸಿದ್ಧವಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು