ಸ್ಪೀಕರ್‌ ರಮೇಶ್‌ ಕುಮಾರ್‌ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ, ಅವರೀಗ ಹೇಳಿದ್ದೇ ಆಗಲಿ: ಸಚಿವ ಮುನಿರತ್ನ ಆಕ್ರೋಶ

ಸ್ಪೀಕರ್‌ ರಮೇಶ್‌ ಕುಮಾರ್‌ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ, ಅವರೀಗ ಹೇಳಿದ್ದೇ ಆಗಲಿ: ಸಚಿವ ಮುನಿರತ್ನ ಆಕ್ರೋಶ

ಬೆಳಗಾವಿ: ಅತ್ಯಾಚಾರದ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ವಿಧಾನಸಭೆ ಮಾಜಿ ಸ್ಪೀಕರ್‌, ಹಾಲಿ ಶಾಸಕ ರಮೇಶ್ ಕುಮಾರ್ ವಿರುದ್ಧ ಸಚಿವ ಮುನಿರತ್ನ ಅವರೂ ಕಿಡಿ ಕಾರಿದ್ದಾರೆ.

ರಮೇಶ್‌ ಕುಮಾರ್‌ ಮುಂದಿನ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಲಿ.

ಆಗ ಅವರಿಗೆ ಹೆಣ್ಣಿನ ಕಷ್ಟ ಏನು ಎಂದು ತಿಳಿಯುತ್ತದೆ. ಅವರಿಗೆ ಹೆಣ್ಣಿನ ಕಷ್ಟ ಗೊತ್ತಿಲ್ಲ. ಅವರು ಸೀರೆ ಉಟ್ಟುಕೊಂಡು ರಸ್ತೆಯಲ್ಲಿ ಹೋಗಲಿ. ಆಗ ಗೊತ್ತಾಗತ್ತೆ ಕಷ್ಟ. ಈಗೇನು ಅವರು ಮಾತನಾಡಿದ್ದಾರೋ, ಈ ಮೂಲಕ ಒಂದು ಹೆಣ್ಣಿಗೆ ಏನು ಅಪಮಾನ‌ ಮಾಡಿದ್ದಾರೋ ಅದು ಅವರಿಗೂ ಅನುಭವ ಆಗಲಿ. ಆಗಲೇ ಹೆಣ್ಣಿನ ಕಷ್ಟ ಗೊತ್ತಾಗುವುದು ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ಮಾತನಾಡಿದ ಮುನಿರತ್ನ, ರಮೇಶ್‌ ಕುಮಾರ್‌ ಅವರಿಗೆ ಬುದ್ಧಿ ಹೇಳುವ ಶಕ್ತಿ ನಮಗಿಲ್ಲ. ಹೆಣ್ಣನ್ನು ಗೌರವಿಸುವುದನ್ನು ಅವರು ಕಲಿಯಬೇಕು. ಈ ರೀತಿ ಹಗುರವಾಗಿ ಮಾತನಾಡಬಾರದು. ಹೆಣ್ಣು ಒಬ್ಬಳು ತಾಯಿ, ತಂಗಿ‌, ಮಗಳು ಎಲ್ಲಾ ಆಗಿರುತ್ತಾರೆ. ಅದನ್ನು ಯೋಚನೆ ಮಾಡಿ ಮಾತನಾಡಬೇಕು. ಈ ಹೇಳಿಕೆ ಅವರ ಸಣ್ಣತನ. ಅವರ ಹಿರಿತನಕ್ಕೆ ಇದು ಶೋಭೆ ತರುವುದಿಲ್ಲ ಎಂದರು. ಭೂಮಿಯಲ್ಲಿ ಯಾರೂ ಕಂಡರಿಯದಂಥ ಅಷ್ಟೂ ಜ್ಞಾನ ಇದ್ದವರೇ ಹೀಗೆ ಆಡಿದರೆ ಹೇಗೆ? ಅದನ್ನು ನಾನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾತಿನ ಭರದಲ್ಲಿ ರಮೇಶ್‌ ಕುಮಾರ್‌ ಅವರು, 'ರೇಪ್‌ಗೆ ಸಂಬಂಧಿಸಿದಂತೆ ಇಂಗ್ಲಿಷ್‌ನಲ್ಲಿ ಇರುವ ನುಡಿಗಟ್ಟು ಹೇಳಿ. ಅತ್ಯಾಚಾರ ಅನಿವಾರ್ಯವಾದರೆ ಆನಂದಿಸಬೇಕು' ಎಂದಿದ್ದರು. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕುರಿತು ರಮೇಶ್‌ ಕುಮಾರ್‌ ಎಲ್ಲರ ಕ್ಷಮೆ ಕೂಡ ಕೋರಿದ್ದಾರೆ.