ಸಾಲು ಸಾಲು ರಜೆ ಹೊತ್ತಲ್ಲಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಸಿಹಿ ಸುದ್ದಿ: 1500 ಹೆಚ್ಚುವರಿ ಬಸ್, ಟಿಕೆಟ್ ನಲ್ಲಿ ವಿಶೇಷ ರಿಯಾಯಿತಿ

ಸಾಲು ಸಾಲು ರಜೆ ಹೊತ್ತಲ್ಲಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಸಿಹಿ ಸುದ್ದಿ: 1500 ಹೆಚ್ಚುವರಿ ಬಸ್, ಟಿಕೆಟ್ ನಲ್ಲಿ ವಿಶೇಷ ರಿಯಾಯಿತಿ

ಬೆಂಗಳೂರು: ಹಬ್ಬಕ್ಕೆ ಊರಿಗೆ ಹೊರಟ ಪ್ರಯಾಣಿಕರಿಗೆ ಸಿಹಿ ಸುದ್ದಿ ಇಲ್ಲಿದೆ. ವೀಕೆಂಡ್ ರಜೆ ಸೇರಿದಂತೆ ನರಕ ಚತುರ್ದಶಿ, ಅಮಾವಾಸ್ಯೆ, ಬಲಿಪಾಡ್ಯಮಿ ಹೀಗೆ ಸಾಲು ಸಾಲು ರಜೆಯ ಸಂದರ್ಭದಲ್ಲಿ ಊರಿಗೆ ಹೋಗುವವರು ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ.

ಹೀಗಾಗಿ ಕೆಎಸ್‌ಆರ್ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದೆ.

ಅ. 21 ರಿಂದ 23ರ ವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ಮತ್ತು ಹೊರ ರಾಜ್ಯಗಳ ನಾನಾ ಸ್ಥಳಗಳಿಗೆ ಹೆಚ್ಚುವರಿಯಾಗಿ 1,500 ವಿಶೇಷ ಬಸ್ ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಅ. 26 ರಿಂದ 30ರವರೆಗೆ ನಾನಾ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ ಗಳು ಮರಳುತ್ತವೆ.

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಶಿವಮೊಗ್ಗ, ಹಾಸನ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ ಕ್ಕೆ ಬಸ್ ಸಂಚರಿಸಲಿವೆ.

ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಕೇರಿ ಮಾರ್ಗದ ಕಡೆ ಬಸ್ ಗಳು ಸಂಚರಿಸುತ್ತವೆ.

ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಕುಂಭಕೋಣಂ, ಮಧುರೆ, ಚೆನ್ನೈ, ಕೊಯಮತ್ತೂರು, ತಿರುಚಿ, ತ್ರಿಶೂರ್, ಎರ್ನಾಕುಲಂ, ಕ್ಯಾಲಿಕಟ್ ಮೊದಲಾದ ಸ್ಥಳಗಳಿಗೆ ಐಷಾರಾಮಿ ಬಸ್ ಗಳು ಸಂಚರಿಸುತ್ತವೆ.

ಪ್ರಯಾಣಿಕರ ದಟ್ಟಣೆ ಆಧರಿಸಿ ವಿಜಯನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್, ಮಲ್ಲೇಶ್ವರ 18ನೇ ಅಡ್ಡರಸ್ತೆ, ಬನಶಂಕರಿ, ಜೀವನ್ ಭೀಮಾ ನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರ ಮತ್ತು ಇತರೆ ಸ್ಥಳಗಳಿಂದ ಶಿವಮೊಗ್ಗ, ದಾವಣಗೆರೆ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು ಮೊದಲಾದ ಕಡೆಗಳಿಗೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ,

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡ 5 ರಷ್ಟು, ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ಶೇಕಡ 10 ರಷ್ಟು ರಿಯಾಯಿತಿ ಸಿಗಲಿದೆ.