ಜನ ಸಾಮಾನ್ಯರಿಗೆ ಮತ್ತೊಂದು ಶಾಕ್: ಶೇಕಡ 20 ರವರೆಗೆ ಏರಿಕೆಯಾಗಲಿದೆ ಸೀಲಿಂಗ್ ಫ್ಯಾನ್ ದರ
ನವದೆಹಲಿ: ಸೀಲಿಂಗ್ ಫ್ಯಾನ್ ಗಳ ಬೆಲೆ ಶೇಕಡ 20 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಜನವರಿ 1 ರಿಂದ ಸೀಲಿಂಗ್ ಫ್ಯಾನ್ ಗಳಲ್ಲಿ ವಿದ್ಯುತ್ ಉಳಿತಾಯದ ಕ್ಷಮತೆ ಸೂಚಿಸುವ ಸ್ಟಾರ್ ರೇಟಿಂಗ್ ನಮೂದಿಸುವುದನ್ನು ಬಿಇಇ ಕಡ್ಡಾಯಗೊಳಿಸಿರುವುದರಿಂದ ಸೀಲಿಂಗ್ ಫ್ಯಾನ್ ಗಳ ಬೆಲೆಯಲ್ಲಿ ಶೇಕಡ 20 ರವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ.
ವಿದ್ಯುತ್ ಉಳಿಸುವ ಸ್ಟಾರ್ ರೇಟಿಂಗ್ನೊಂದಿಗೆ ಫ್ಯಾನ್ ಗಳನ್ನು ಮಾರಾಟ ಮಾಡುವುದು ಜನವರಿ 1 ರಿಂದ ಕಡ್ಡಾಯವಾಗಿದೆ. ಅವುಗಳ (ಸೀಲಿಂಗ್ ಫ್ಯಾನ್) ಬೆಲೆಗಳು ಎಂಟರಿಂದ 20 ಪ್ರತಿಶತದಷ್ಟು ಹೆಚ್ಚಾಗಬಹುದು. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ(ಬಿಇಇ) ಯ ಪರಿಷ್ಕೃತ ಮಾನದಂಡಗಳ ಪ್ರಕಾರ ವಿದ್ಯುತ್ ಉಳಿಸುವ ಸಾಮರ್ಥ್ಯದ ಆಧಾರದ ಮೇಲೆ ಈಗ ವಿದ್ಯುತ್ ಫ್ಯಾನ್ ಗಳಿಗೆ ಸ್ಟಾರ್ ರೇಟಿಂಗ್ಗಳನ್ನು ನೀಡಲಾಗುತ್ತದೆ. ಒಂದು ಸ್ಟಾರ್ ರೇಟಿಂಗ್ ಹೊಂದಿರುವ ಫ್ಯಾನ್ ಕನಿಷ್ಠ 30 ಪ್ರತಿಶತ ವಿದ್ಯುತ್ ಅನ್ನು ಉಳಿಸುತ್ತದೆ ಮತ್ತು ಐದು ಸ್ಟಾರ್ ದರದ ಫ್ಯಾನ್ ಶೇಕಡಾ 50 ಕ್ಕಿಂತ ಹೆಚ್ಚು ವಿದ್ಯುತ್ ಉಳಿಸುತ್ತದೆ.
ಪ್ರಮುಖ ಫ್ಯಾನ್ ತಯಾರಿಕಾ ಕಂಪನಿಗಳಾಗಿರುವ ಉಷಾ ಇಂಟರ್ನ್ಯಾಷನಲ್, ಓರಿಯೆಂಟ್ ಎಲೆಕ್ಟ್ರಿಕ್, ಹ್ಯಾವೆಲ್ಸ್ ಈ ನಿರ್ಧಾರ ಸ್ವಾಗತಿಸಿದ್ದು, ಫೈವ್ ಸ್ಟಾರ್ ಹೊಂದಿರುವ ಫ್ಯಾನ್ ಗಳಿಗೆ ಬಳಸುವ ಮೋಟರ್ ಮತ್ತು ಎಲೆಕ್ಟ್ರಾನಿಕ್ ಬಿಡಿ ಭಾಗಗಳ ಆಮದು ಮಾಡಿಕೊಳ್ಳವುದರಿಂದ ಫ್ಯಾನ್ ತಯಾರಿಕೆ ವೆಚ್ಚ ಶೇಕಡ 5 ರಿಂದ 20 ರವರೆಗೆ ಹೆಚ್ಚಾಗಲಿದೆ ಎಂದು ತಿಳಿಸಿವೆ. ಬೆಲೆ 5% ರಿಂದ 20% ವರೆಗೆ ಹೆಚ್ಚಾಗುವ ನಿರೀಕ್ಷೆಯಿದೆ.