ವೋಟರ್ ಐಡಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ, ಅಂತಿಮ ಗಡುವು ಯಾವಾಗ?

ಭಾರತ ಸರ್ಕಾರವು ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಲಿಂಕ್ ಮಾಡಲು ನೀಡಿರುವ ಗಡುವನ್ನು ವಿಸ್ತರಣೆ ಮಾಡಿದೆ. ಆರಂಭದಲ್ಲಿ ಇವೆರಡು ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡಲು ನೀಡಿದ್ದ ಅವಧಿಯು 2023ರ ಮಾರ್ಚ್ 31 ಕೊನೆಯಾಗಬೇಕಿತ್ತು. ಆದರೆ, ಇದೀಗ ಗಡುವನ್ನು ಒಂದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಲಾಗಿದ್ದು, 2024ರ ಮಾರ್ಚ್ 31 ಆಧಾರ್ ವೋಟರ್ ಐಡಿ ಲಿಂಕ್ ಕೊನೆಯ ದಿನವಾಗಿರುತ್ತದೆ.
ಆದರೆ, ಮತದಾರರ ಗುರುತಿನ ಚೀಟಿಯನ್ನು ಆಧಾರ್ ಜತೆ ಲಿಂಕ್ ಮಾಡುವುದು ಕಡ್ಡಾಯವಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಇದು ಬಳಕೆದಾರರ ಆದ್ಯತೆ ಮೇಲೆ ಅವಲಂಬಿತವಾಗಿದೆ. ಕಾನೂನು ಮತ್ತು ನ್ಯಾಯ ಸಚಿವಾಲಯವು ಜೂನ್ 17, 2022 ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ಈ ಹಿಂದಿನ ಗಡುವು 2023ರ ಮಾ.31 ಆಗಿತ್ತು. ಆದರೆ ಇದೀಗ ಈ ಅವಧಿಯನ್ನು 2024ರವರೆಗೆ ವಿಸ್ತರಣೆ ಮಾಡಿದ್ದು, ಹೀಗಾಗಿ ಗುರುತಿನ ಚೀಟಿಯನ್ನು ಆಧಾರ್ ಜತೆ ಲಿಂಕ್ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇದು ಹೆಚ್ಚಿನ ಸಮಯ ಒದಗಿಸಿದಂತಾಗುತ್ತದೆ.
ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ತಮ್ಮ ಗುರುತಿನ ಚೀಟಿಯನ್ನು ಆಧಾರ್ ಜತೆ ಲಿಂಕ್ ಮಾಡಲು ಬಯಸಿದರೆ ಇದು ಒಂದು ಸರಳ ಪ್ರಕ್ರಿಯೆಯಾಗಿದೆ. ಮೊದಲು ರಾಷ್ಟ್ರೀಯ ಮತದಾರರ ಸೇವೆಗಳ ಅಧಿಕೃತ ಪೋರ್ಟಲ್ nvsp.in ಭೇಟಿ ನೀಡಿ. ಹೋಮ್ ಪೇಜ್ ನಲ್ಲಿ "Search in Electoral Roll" ಆಯ್ಕೆಯನ್ನು ಆರಿಸಿ. ಬಳಿಕ ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ. ಇದಾದ ಬಳಿಕ ನಿಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. OTP ಅನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿ. ಇದಾದ ಬಳಿಕ ನಿಮ್ಮ ಎರಡು ಐಡಿಗಳನ್ನೂ 10 ನಿಮಿಷಗಳೊಳಗಡೆ ಲಿಂಕ್ ಮಾಡಲಾಗುತ್ತದೆ.
ಗಡುವು ವಿಸ್ತರಣೆಯಿಂದ ಈ ಎರಡು ಐಡಿ ಲಿಂಕ್ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇದು ಹೆಚ್ಚಿನ ಸಮಯ ದೊರಕುತ್ತದೆ ಆದರೆ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಜತೆ ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.
ಬಳಕೆದಾರರ ವೈಯಕ್ತಿಕ ಆದ್ಯತೆ ಮತ್ತು ಅನುಕೂಲತೆಗೆ ಆಧಾರದ ಮೇಲೆ ಈ ಎರಡು ಐಡಿ ಲಿಂಕ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಈ ವಿಸ್ತರಣೆಯಿಂದ ಈ ಹಿಂದೆ ನೀಡಿದ ಗಡುವಿನಲ್ಲಿ ಲಿಂಕ್ ಮಾಡಲಾಗದೆ ಹೆಣಗಾಡುತ್ತಿರುವವರಿಗೆ ಪರಿಹಾರ ಒದಗಿಸುತ್ತದೆ. ಜೊತೆಗೆ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸೇವೆಗಳಿಗೆ ಸುಲಭವಾಗಿ ಪಡೆಯಲು ತಮ್ಮ ಐಡಿಗಳನ್ನು ಲಿಂಕ್ ಮಾಡಲು ಹೆಚ್ಚಿನವರಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಭಾವಿಸಲಾಗಿದೆ.
ಆಧಾರ್ ಮತ್ತು ವೋಟರ್ ಐಡಿ ಜೋಡಣೆಯಾದರೆ ಮುಖ್ಯವಾಗಿ ನಕಲಿ ಮತದಾನದ ಕಿರಿಕಿರಿ ತಪ್ಪಲಿದೆ. ಯಾಕೆಂದರೆ ಮತದಾನದ ವೇಳೆ ಒಮ್ಮೆ ಮತದಾರರ ಆಧಾರ್ ಕಾರ್ಡ್ ಸಂಖ್ಯೆ ದಾಖಲೆಕೊಂಡರೆ, ಮತ್ತೊಂದು ಬೂತ್‌ಗೆ ಹೋಗಿ, ಅಥವಾ ಆತನ ಹೆಸರಿನಲ್ಲಿ ಮತ್ತೋರ್ವ ನಕಲಿ ಮತದಾನ ಮಾಡಿ ವಂಚಿಸುವುದು ತಪ್ಪಲಿದೆ.
ಡಿಸೆಂಬರ್ 2021 ರಲ್ಲಿ ಲೋಕಸಭೆಯಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ ನಂತರ ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಅಧಿಕೃತಗೊಳಿಸಲಾಯಿತು.