ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್ ಭಾರೀ ಖರ್ಚು; ಚುನಾವಣಾ ಪ್ರಚಾರಕ್ಕಿಂತೇನು ಕಡಿಮೆ ಇರಲಿಲ್ಲ: ಸ್ಥಳೀಯರ ಅಭಿಪ್ರಾಯ

ಕನಕಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೇಕೆದಾಟು ಪಾದಯಾತ್ರೆ ಚುನಾವಣಾ ರ್ಯಾಲಿಗಿಂತ ಕಡಿಮೆಯಿರಲಿಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕಾವೇರಿ ಸಂಗಮದಿಂದ ಆರಂಭವಾದ ಪಾದಯಾತ್ರೆ ರಾಮನಗರ ತಲುಪುವ ಮುನ್ನವೇ ಕರ್ನಾಟಕ ಹೈಕೋರ್ಟ್ ಪಾದಯಾತ್ರೆಗೆ ಅನುಮತಿ ನೀಡಿದ್ದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಇದೀಗ ಜನರು ಪಾದಯಾತ್ರೆಯನ್ನು ಚುನಾವಣಾ ರ್ಯಾಲಿಗೆ ಹೋಲಿಕೆ ಮಾಡುತ್ತಿದ್ದಾರೆ. ಪಾದಯಾತ್ರೆಗೆ ಕಾಂಗ್ರೆಸ್ ನಾಯಕರು ಭಾರೀ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡಿದ್ದು, ಈ ಕುರಿತು ಸ್ಥಳೀಯರು ಅಂದಾಜು ವೆಚ್ಚ ಹಾಗೂ ಪಾದಯಾತ್ರೆಯನ್ನು ಚುನಾವಣಾ ರ್ಯಾಲಿಗೆ ಹೋಲಿಕೆ ಮಾಡಿ ಮಾತನಾಡಲು ಪ್ರಾರಂಭಿಸಿದ್ದಾರೆ.
ಕೆಲವರು ಯೋಜನೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರೆ, ಕೆಲವರು ಡಿಕೆ.ಶಿವಕುಮಾರ್ ಅವರ ಬೆಳವಣಿಗೆ ಕುರಿತು ಪರ ಹಾಗೂ ವಿರೋಧದ ಮಾತುಗಳನ್ನು ಆಡುತ್ತಿರುವುದು ಕಂಡು ಬರುತ್ತಿದೆ.
ಪಾದಯಾತ್ರೆಯು ನಾವು ಎಂದೂ ಕಂಡಿರದ ಚುನಾವಣಾ ರ್ಯಾಲಿಯಂತಿತ್ತು. ಕೆಲ ಬೆಂಬಲಿಗರು ಜನರಿಗೆ ಹಣವನ್ನು ನೀಡುತ್ತಿದ್ದರು. ಕೆಲವರು ಹಣ ತೆಗೆದುಕೊಂಡರೆ, ಕೆಲವು ನಿರಾಕರಿಸುತ್ತಿದ್ದರು. ಚುನಾವಣೆ ವೇಳೆ ಪಕ್ಷದ ನಾಯಕರು ಹಣ ನೀಡಲು ಬಂದಾಗ ನಾವು ನಿರಾಕರಿಸುತ್ತಿದ್ದೆವು ಎಂದು ದೊಡ್ಡಾಲಹಳ್ಳಿಯ ಮಹಿಳೆಯೊಬ್ಬರು ಹೇಳಿದ್ದಾರೆ.
ಡಿಕೆ. ಶಿವಕುಮಾರ್ ಯಾವ ನಕ್ಷತ್ರದಲ್ಲಿ ಹುಟ್ಟಿದ್ದಾರೋ ಗೊತ್ತಿಲ್ಲ. ಅವರು ತುಂಬಾ ಧೈರ್ಯಶಾಲಿ ಮತ್ತು ಜೈಲಿಗೆ ಹೋಗುವ ಭಯವೇ ಅವರಿಗಿಲ್ಲ. ಆ ರೀತಿಯಲ್ಲಿಯೇ ಅವರು ಬದುಕುತ್ತಿದ್ದಾರೆ. ಗುರ್ತಿಕೆ ಇಲ್ಲದ ಜೀವ ಎಷ್ಟು ಕಾಲ ಬದುಕಿದ್ದರೇನು ಪ್ರಯೋಜನ ಎಂದು ತಿಮ್ಮವ್ವ ಅವರು ಶಿವಕುಮಾರ್ ಅವರನ್ನು ಕೊಂಡಿದ್ದಾರೆ.
ಪಾದಯಾತ್ರೆಗೆ ಹೈಕೋರ್ಟ್ ಕಿಡಿಕಾರಿತ್ತು. ಹೀಗಾಗಿಯೇ ಡಿಕೆ.ಶಿವಕುಮಾರ್ ಪಾದಯಾತ್ರೆ ನಿಲ್ಲಿಸಲೇಬೇಕಾಯಿತು ಎಂದು ಮಾದಮ್ಮ ಅವರು ಹೇಳಿದ್ದಾರೆ.
"ಬೆಂಗಳೂರಿನಿಂದ ಮತ್ತು ಬಾಗಲಕೋಟೆಯವರೆಗೂ ಹೊರಗಿನವರು ನಮ್ಮ ಊರುಗಳನ್ನು ಪ್ರವೇಶಿಸಿದ್ದರು. ಇದರಿಂದ ಸೋಂಕು ಹರಡುವ ಭೀತಿ ಶುರುವಾಗಿದೆ ಎಂದು ನಾರಾಯಣ ಎಂಬುವವರು ಪಾದಯಾತ್ರೆ ವಿರುದ್ಧ ಕಿಡಿಕಾರಿದ್ದಾರೆ.
ಶಿವಕುಮಾರ್ ಅವರು ಪಾದಯಾತ್ರೆ ನಡೆಸಿದ್ದು ಒಳ್ಳೆಯದು, ಇದರಿಂದ ನಮಗೆ ಕುಡಿಯಲು ಕಾವೇರಿ ನೀರು ಸಿಗುತ್ತದೆ. ಆದರೆ ಅದನ್ನು ಜಾರಿಗೆ ತರಲು ತಮಿಳುನಾಡು ಬಿಡುತ್ತದೆಯೇ? ಎಂದು ಕನಕಪುರದ ಪವರ್ಲೂಮ್ ಮಾಲೀಕ ಮೋಹನ್ ಎಂಬುವವರು ಪ್ರಶ್ನಿಸಿದ್ದಾರೆ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಯುವಕರ ಸೆಳೆಯರು ಕಾಂಗ್ರೆಸ್ ನಾಯಕರು ದ್ವಿಚಕ್ರ ವಾಹನಗಳಿಗೆ ಉಚಿತವಾಗಿ ಪೆಟ್ರೋಲ್ ಹಾಕಿಸಿದ್ದರು ಎಂದು ದೊಡ್ಡಾಲಹಳ್ಳಿಯ ನಿವಾರಿ ಶಿವರೇಣುಕಾ ಎಂಬುವವರು ಹೇಳಿದ್ದಾರೆ.
ತನ್ನ ಜನಪ್ರಿಯತೆ ಕ್ಷೀಣಿಸುತ್ತಿದೆ ಎಂಬುದನ್ನ ಅರಿತ ಕಾಂಗ್ರೆಸ್, ಪಕ್ಷದ ಕಾರ್ಯಕರ್ತರನ್ನು ಸಂಘಟಿಸಲು ಪಾದಯಾತ್ರೆ ಕೈಗೊಂಡಿತ್ತು. ದೊಡ್ಡಾಲಹಳ್ಳಿಯೊಂದರಲ್ಲಿಯೇ ಅಪಾರ ಪ್ರಮಾಣದಲ್ಲಿ ಹಣವನ್ನು ಕರ್ಚು ಮಾಡಿ 1000 ಯುವಕರಿಗೆ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕಿಸಲು ತಲಾ 300 ರೂ.ಗಳ ಕೂಪನ್ ವಿತರಿಸಿತ್ತು. ಪಾದಯಾತ್ರೆಯ ಪ್ರತಿ ದಿನ ಸ್ಥಳೀಯ ಪೆಟ್ರೋಲ್ ಬಂಕ್ ಗಳಲ್ಲಿ ಯುವಕರ ಬೈಕ್ ಗಳಿಗೆ ಪೆಟ್ರೋಲ್ ತುಂಬಿಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.