ಪಾಕ್‌ಗೆ ರಹಸ್ಯ ಮಾಹಿತಿ ಯೋಧನಿಗೆ ಕೋರ್ಟ್ ಮಾರ್ಷಲ್

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಚೀನ ಗಡಿಯಲ್ಲಿ ಸೇನೆಯ ಚಟುವಟಿಕೆ ಕುರಿತಾದ ರಹಸ್ಯ ಮಾಹಿತಿಗಳನ್ನು ಪಾಕಿಸ್ಥಾನದ ರಾಯಭಾರ ಕಚೇರಿಗೆ ಕಳುಹಿಸಿಕೊಟ್ಟು ಸಿಕ್ಕಿಬಿದ್ದ ಯೋಧನ ವಿರುದ್ಧ ಸೇನೆ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಆರಂಭಿಸಿದೆ.
ಪಾಕ್ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಗುಪ್ತಚರ ಆಬಿದ್ ಹುಸೇನ್ ಅಲಿಯಾಸ್ ನಾಯ್ಕ ಆಬಿದ್ ಎಂಬಾತನಿಗೆ ರಹಸ್ಯ ಮಾಹಿತಿಗಳನ್ನು ಕಳುಹಿಸುತ್ತಿದ್ದಾಗಲೇ ಚೀನ ಗಡಿಯಲ್ಲಿ ನಿಯೋಜಿಸಲ್ಪಟ್ಟಿದ್ದ ಭಾರತದ ಯೋಧ (ಸಿಗ್ನಲ್‌ಮ್ಯಾನ್ ) ಅಲೀಂ ಖಾನ್ ಸಿಕ್ಕಿಬಿದ್ದಿದ್ದರು.
ಎಲ್‌ಎಸಿಯಲ್ಲಿ ಚೀನ ಸೇನೆಯು ಅತಿಕ್ರಮಣಕ್ಕೆ ಯತ್ನಿಸುತ್ತಿದ್ದಂಥ ನಿರ್ಣಾಯಕ ಸಮಯದಲ್ಲೇ ಈ ಕೃತ್ಯ ನಡೆದಿತ್ತು. ಶತ್ರು ರಾಷ್ಟ್ರದ ಕೈಗೆ ಸಣ್ಣ ಮಾಹಿತಿ ಸಿಕ್ಕರೂ ಅದು ಭಾರತೀಯ ಪಡೆಗಳಿಗೆ ಪ್ರತಿಕೂಲವಾಗಿ ಪರಿಣಮಿಸುತ್ತಿತ್ತು. ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸೇನೆ, ಯೋಧ ಅಲೀಂ ಖಾನ್ ವಿರುದ್ಧ ಕೋರ್ಟ್ ಮಾರ್ಷಲ್ ಪ್ರಕ್ರಿಯೆ ಆರಂಭಿಸುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಭದ್ರತಾ ಸಿಬಂದಿಯ ಕರ್ತವ್ಯದ ಪಟ್ಟಿ, ತಾನು ಕಾರ್ಯ ನಿರ್ವಹಿಸುತ್ತಿರುವ ಪಡೆಯ ಚಟುವಟಿಕೆಗಳು, ತಮ್ಮಲ್ಲಿರುವ ವಾಹನಗಳು ಮುಂತಾದ ಮಾಹಿತಿಗಳನ್ನು ಖಾನ್ ರವಾನಿಸಿದ್ದರು. ಇಂಥ ಕೃತ್ಯಗಳ ಬಗ್ಗೆ ಸೇನೆಯು ಶೂನ್ಯ ಸಹಿಷ್ಣುತೆ ಹೊಂದಿದ್ದು, ತಪ್ಪಿತಸ್ಥರಿಗೆ ಕಠಿನ ಶಿಕ್ಷೆ ವಿಧಿಸಲಾಗುತ್ತದೆ ಎಂದು ಸೇನೆ ಹೇಳಿದೆ.