ರೋಗಿಯ ಜೀವ ಉಳಿಸಲು ಬೆಂಗಳೂರಿನ ಟ್ರಾಫಿಕ್ನಲ್ಲಿ 3 ಕಿ.ಮೀ. ಓಡಿದ ಡಾಕ್ಟರ್! ವಿಡಿಯೋ ವೈರಲ್, ಎಲ್ಲೆಡೆ ಮೆಚ್ಚುಗೆ

ಬೆಂಗಳೂರು: ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿದ್ದ ವೈದ್ಯರೊಬ್ಬರು ನಿಗದಿತ ಸಮಯದಲ್ಲಿ ಆಸ್ಪತ್ರೆಗೆ ತಲುಪಲು ಹಾಗೂ ರೋಗಿಯೊಬ್ಬರ ಶಸ್ತ್ರಚಿಕಿತ್ಸೆ ಮಾಡಲು ಕಾರನ್ನು ಅಲ್ಲೇ ಬಿಟ್ಟು 3 ಕಿ.ಮೀ. ದೂರ ಓಡಿರುವ ದೃಶ್ಯ ವೈರಲ್ ಆಗಿದೆ. ಟ್ರಾಫಿಕ್ನಲ್ಲೇ ವೈದ್ಯರು ಓಡಿಕೊಂಡೇ ಆಸ್ಪತ್ರೆಗೆ ಬಂದು ರೋಗಿಯ ಜೀವ ಉಳಿಸಿದ್ದಾರೆ.
ಇಂತಹ ಹೃದಯಸ್ಪರ್ಶಿ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವೈದ್ಯರ ನಡೆಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬರುತ್ತಿದೆ. ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕ ಡಾ.ಗೋವಿಂದ್ ನಂದಕುಮಾರ್ ಅವರು ಕಳೆದ ಆ.30ರಂದು ಎಂದಿನಂತೆ ಆಸ್ಪತ್ರೆಗೆ ಕಾರಿನಲ್ಲಿ ತೆರಳುತ್ತಿದ್ದರು. ಮಳೆಯ ಪರಿಣಾಮ ಅಂದು ಟ್ರಾಫಿಕ್ ಜಾಮ್ ಆಗಿ ಸರ್ಜಾಪುರ-ಮಾರತಹಳ್ಳಿ ರಸ್ತೆಯಲ್ಲಿ ಕಿಲೋಮೀಟರ್ ದೂರದವರೆಗೂ ವಾಹನಗಳು ಸಾಲುಗಟ್ಟಿನಿಂತಿದ್ದವು. ವಾಹನ ಸಂಚಾರ ಸುಗಮವಾಗಿದ್ದರೆ 10 ನಿಮಿಷದಲ್ಲಿ ವೈದ್ಯ ಡಾ.ಗೋವಿಂದ್ ಅವರು ಆಸ್ಪತ್ರೆಗೆ ತಲುಪಲಿದ್ದರು. ಆದರೆ, ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದರು. ಅತ್ತ ರೋಗಿಯೊಬ್ಬರಿಗೆ ಕರುಳಿನ ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ನಡೆದಿತ್ತು. ನಿಗದಿತ ಸಮಯಕ್ಕೆ ತಲುಪಲು ಟ್ರಾಫಿಕ್ ಅಡ್ಡಿಯಾಗಿತ್ತು. ಇದನ್ನರಿದ ಅವರು ಕಾರನ್ನು ಚಾಲಕನಿಗೆ ತರಲು ಹೇಳಿ, ಕಾರಿಂದ ಕೆಳಗಿಳಿದು ಓಡಿಕೊಂಡೇ ಆಸ್ಪತ್ರೆಗೆ ತಲುಪಿದರು.
ಈ ದೃಶ್ಯ ವೈರಲ್ ಆದ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಾ.ಗೋವಿಂದ್, ಅಂದು ರೋಗಿಯೊಬ್ಬರಿಗೆ ಲ್ಯಾಪ್ರೋಸ್ಕೋಪಿ ಮೂಲಕ ಪಿತ್ತಕೋಶದ ಶಸ್ತ್ರಚಿಕಿತ್ಸೆ ಮಾಡಲು ನಿಗದಿಯಾಗಿತ್ತು. ನಾನು ಎಂದಿನಂತೆ ಸರಿಯಾದ ಸಮಯಕ್ಕೆ ಮನೆಯಿಂದ ಹೊರಟೆ. ಆದರೆ ಆಸ್ಪತ್ರೆಗೆ ತಲುಪಲು 3 ಕಿ.ಮೀ. ದೂರ ಇರುವಾಗಲೇ ಟ್ರಾಫಿಕ್ನಲ್ಲಿ ಸಿಲುಕಿದೆ. 10-15 ನಿಮಿಷ ಕಾದೆ. ಗೂಗಲ್ ನಕ್ಷೆಯಲ್ಲಿ ಪರಿಶೀಲಿಸಿದಾಗ 45 ನಿಮಿಷ ಆಗುತ್ತೆ ಎಂದು ತೋರಿಸುತ್ತಿತ್ತು. ನಿತ್ಯ ಆಸ್ಪತ್ರೆಗೆ ತಲುಪಲು 10 ನಿಮಿಷ ಆಗುತ್ತಿತ್ತು. ಈಗ ಇನ್ನೂ 45 ನಿಮಿಷ ಎಂದು ತೋರಿಸುತ್ತಿದೆ. ಸದ್ಯಕ್ಕೆ ಟ್ರಾಫಿಕ್ ಕ್ಲಿಯರ್ ಆಗುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಶಸ್ತ್ರಚಿಕಿತ್ಸೆಗೆ ತಡವಾದರೆ ರೋಗಿಗೆ ತೊಂದರೆ ಆಗಬಹುದೆಂದು ಯೋಚಿಸಿ ಕಾರನ್ನು ನನ್ನ ಡ್ರೈವರ್ಗೆ ತರಲು ಹೇಳಿ ನಾನು ಕಾಲ್ನಡಿಗೆಯಲ್ಲೇ ಹೋದೆ. ನಾನು ಜಿಮ್ಗೆ ಹೋಗುವುದರಿಂದ ಓಡಲು ಸುಲಭವಾಯಿತು ಎಂದು ವಿವರಿಸಿದರು.
.@SoumiEmd @CCellini @andersoncooper @WCMSurgery @nycHealthy @NYCRUNS https://t.co/54zt4H5SxY #runtowork @ManipalHealth #togetherstronger pic.twitter.com/21NYbZgraX
— Govind Nandakumar MD (@docgovind) September 12, 2022
ರೋಗಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ನಮ್ಮ ಡ್ರೈವರ್ ಸುಮಾರು ಎರಡೂವರೆ ಗಂಟೆಗಳ ಬಳಿಕ ಆಸ್ಪತ್ರೆಗೆ ಕಾರನ್ನು ತಂದರು. ನಾನು ಕಾರಿನಲ್ಲೇ ಕುಳಿತ್ತಿದ್ದರೆ ಅದೇ ಸಮಯಕ್ಕೆ ಬರಬೇಕಿತ್ತು. ರೋಗಿಗಳ ಯೋಗಕ್ಷೇಮ ನನಗೆ ಮುಖ್ಯ ಎನ್ನುವಾಗ ಅವರ ಮುಖದಲ್ಲಿ ಸಾರ್ಥಕಭಾವ ಕಾಣುತ್ತಿತ್ತು.