ರೈತರಿಗೆ ಮತ್ತೊಂದು ಗುಡ್ ನ್ಯೂಸ್: ನೇರವಾಗಿ ಮೆಕ್ಕಜೋಳ ಖರೀದಿ

ಶಿವಮೊಗ್ಗ: ಮೆಕ್ಕೆಜೋಳ ಬೆಳೆದ ರೈತರಿಗೆ ನೆರವಾಗಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು ರೈತರಿಂದ ಮೆಕ್ಕೆಜೋಳವನ್ನು ನೇರವಾಗಿ ಪ್ರತಿ ಕ್ವಿಂಟಾಲ್‍ಗೆ 2000 ರೂ.(ಗೋಣಿಚೀಲ ಮತ್ತು ಸಾಗಾಣಿಕಾ ಪ್ರೋತ್ಸಾಹಧನ 38 ರೂ. ಸೇರಿ) ಬೆಲೆಯಲ್ಲಿ ಖರೀದಿಸಲಾಗುವುದು.
ಮೆಕ್ಕೆಜೋಳ ಬೆಳೆದಿರುವ ರೈತರು ನವೆಂಬರ್ 9 ರಿಂದ ತಮ್ಮ ಆಧಾರ್ ಸಂಖ್ಯೆ FRUITS ಸಂಖ್ಯೆಯೊಂದಿಗೆ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸಂಪರ್ಕಿಸಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಕರ್ನಾಟಕ ಹಾಲು ಮಹಾಮಂಡಳ ಶಿಕಾರಿಪುರ ಪಶು ಆಹಾರ ಘಟಕಕ್ಕೆ ಅವಶ್ಯವಿರುವ 25000 ಮೆ.ಟನ್ ಮೆಕ್ಕಜೋಳವನ್ನು ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲಾ ವ್ಯಾಪ್ತಿಯ ಪ್ರದೇಶದ ರೈತರುಗಳಿಂದ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಪ್ರಸ್ತುತ ಬಳಕೆ ಮಾಡುತ್ತಿರುವ ಕ್ಷೀರಸಿರಿ ಮತ್ತು ಸರ್ಕಾರದ ಕೃಷಿ ಇಲಾಖೆ ಸಿದ್ದಪಡಿಸಿರುವ FRUITS ತಂತ್ರಾಂಶದ ಮೂಲಕ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಅನುಷ್ಟಾನಕ್ಕೆ ತರುವುದಾಗಿ ಶಿಕಾರಿಪುರ ಪಶು ಆಹಾರ ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಬಿ.ಟಿ.ಕಿಶೋರ್ ತಿಳಿಸಿದ್ದಾರೆ.
ಪ್ರತಿ ಒಬ್ಬ ರೈತರಿಂದ ಗರಿಷ್ಟ 500 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಸೀಮಿತಗೊಳಿಸಿದ್ದು, ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಈ ಅವಕಾಶವನ್ನು ಉಪಯೋಗಿಸಿಕೊಂಡು ರೈತರೇ ನೇರವಾಗಿ ಸರಬರಾಜು ಮಾಡಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಕಚೇರಿ ದೂ.ಸಂ: 9606012571 ನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.