ರಾಜ್ಯದ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಜಾರಿಗೆ ಸಮಿತಿ ರಚನೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ( School and College ) ನೈತಿಕ ಶಿಕ್ಷಣ ಹಾಗೂ ಧ್ಯಾನವನ್ನು ( Meditation, Moral education ) ನೀಡುವ ಬಗ್ಗೆ ಸರ್ಕಾರ ಈಗಾಗಲೇ ಪ್ರಸ್ತಾಪಿಸಿತ್ತು. ಅದರಂತೆ ಇಂದು ರಾಜ್ಯದ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹತ್ತು ನಿಮಿಷ ಕಾಲ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ಸಂಬಂಧ ವರದಿ ನೀಡುವಂತೆ ಆರು ಮಂದಿ ತಜ್ಞರ ಸಮಿತಿಯನ್ನು ( Expert Committee ) ರಚಿಸಿ ಸರ್ಕಾರ ಆದೇಶಿಸಿದೆ.
ಇಂದು ಈ ಕುರಿತಂತೆ ಪ್ರಾಥಮಿಕ ಶಿಕ್ಷಣದ ( Primary Education ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ರಾಜ್ಯದಲ್ಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಢತೆ, ಏಕಾಗ್ರತೆ, ಆರೋಗ್ಯ ವೃದ್ಧಿ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಸ್ಪಂದನೆ ಹೆಚ್ಚಾಗಿ, ಏಕಾಂಗ್ರತೆ ಕೂಡ ಮೂಡಲು ಸಹಕಾರಿಯಾಗುತ್ತದೆ ಎಂದಿದ್ದಾರೆ.
ವಿದ್ಯಾರ್ಥಿಗಳ ಭೌತಿಕ, ಮಾನಸಿಕ ಆರೋಗ್ಯದ ಮೇಲೆ ಧ್ಯಾನ ಅನುಕೂಲಕರ ಪರಿಣಾಮವನ್ನು ಬೀರುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಧ್ಯಾನವನ್ನು ಶಾಲೆಗಳಿಗೆ ಅಳವಡಿಸಿಕೊಳ್ಳುವುದು ಸೂಕ್ತವಾಗಿರುತ್ತದೆ ಎಂಬುದಾಗಿ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೇ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಬೋಧಿಸುವ ಅವಶ್ಯಕತೆ ಇರುತ್ತದೆ. ಈ ನೈತಿಕ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳಿಗೆ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸತ್ಚಾರಿತ್ಯ, ಅಹಿಂಸೆ, ಸಹಕಾರ, ಸಹೋದರತ್ವ, ಸಹಿಷ್ಣುತ ಮನೋಭಾವನ ಇತ್ಯಾತಿ ಗುಣಗಳನ್ನು ರೂಪಿಸಲು ಪ್ರಮುಖ ಕರ್ತವ್ಯವಾಗಿದೆ ಎಂಬುದಾಗಿ ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹತ್ತು ನಿಮಿಷಗಳ ಕಾಲ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ಕುರಿತು ಶಿಕ್ಷಣ ತಜ್ಞರಿಂದ ವರದಿ ಪಡೆಯಲು 6 ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದಿದ್ದಾರೆ.
ತಜ್ಞರ ಸಮಿತಿಯ ಅಧ್ಯಕ್ಷತೆಯನ್ನು ಡಾ.ಗುರುರಾಜ ಕರಜಗಿ ವಹಿಸಿದ್ದರೇ, ಸದಸ್ಯರಾಗಿ ಬೆಂಗಳೂರಿನ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ಜಿ ದ್ವಾರಕನಾಥ್, ವಿಭು ಅಕಾಡೆಮಿಯ ಡಾ.ವಿ.ಬಿ ಆರತಿ, ಡ್ರೀಮ್ ಎ ಡ್ರೀಮ್ ಸಿಇಒ ಸುಚೇತಾ ಭಟ್, ಸೋಫಿಯಾ ಪ್ರೌಢ ಶಾಲೆ ಪ್ರಾಂಶುಪಾಲೆ ಸಿಸ್ಟರ್ ಅಲ್ಲನ ಎಸ್ ಎನ್ ಡಿ ಹಾಗೂ ಬಾಗೇಪಲ್ಲಿ ಟೌನ್ ನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಬಿ ಅಮೀರ್ ಖಾನ್ ನೇಮಿಸಿದೆ.
ವರದಿ: ವಸಂತ ಬಿ ಈಶ್ವರಗೆರೆ