ಮೋದಿ-ಪುಟಿನ್‌ ಭೇಟಿ: ಪಾಕ್​, ಚೀನಾ ಬೆರಗುಗಣ್ಣಿನಿಂದ ನೋಡ್ತಿರೋದ್ಯಾಕೆ?

ಮೋದಿ-ಪುಟಿನ್‌ ಭೇಟಿ: ಪಾಕ್​, ಚೀನಾ ಬೆರಗುಗಣ್ಣಿನಿಂದ ನೋಡ್ತಿರೋದ್ಯಾಕೆ?

ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದ್ರೂ ಅಲ್ಲಿ ಪಕ್ಕಾ ಲೆಕ್ಕಾಚಾರವಿರುತ್ತೆ. ಇಡೀ ವಿಶ್ವವೇ ಕುತೂಹಲದಿಂದ ತಿರುಗಿ ನೋಡುವ ಸೆಳೆತ ಇದ್ದೇ ಇರುತ್ತೆ. ಇದೀಗ ಮೋದಿ, ಪುಟಿನ್‌ ಭೇಟಿ ಭಾರೀ ಸಂಚಲನ ಸೃಷ್ಟಿಸುತ್ತಿದೆ. ಭಾರತದ ಶತ್ರುಗಳು ಅಷ್ಟೇ ಅಲ್ಲ, ಮಿತ್ರರೂ ಕೂಡ ಈ ಭೇಟಿಯನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.

ಇದು, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ನಡುವಿನ ಈ ಹಿಂದಿನ ಭೇಟಿ. 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಇಬ್ಬರು ನಾಯಕರು ಸುಮಾರು 18 ಬಾರಿ ಭೇಟಿಯಾಗಿದ್ದಾರೆ. ಭೇಟಿಯಾದಾಗೆಲ್ಲ ವಿಶ್ವಕ್ಕೆ ಒಂದು ಬಲವಾದ ಸಂದೇಶ ರವಾನಿಸಿದ್ದಾರೆ. ಇದೀಗ ಡಿಸೆಂಬರ್‌ 6 ರಂದು ಪುಟಿನ್‌ ಭಾರತಕ್ಕೆ ಆಗಮಿಸುತ್ತಿದ್ದು, ಉಭಯ ನಾಯಕರು ಮತ್ತೊಮ್ಮೆ ಭೇಟಿಯಾಗಲಿದ್ದಾರೆ. ಇದು ಸಹಜವಾಗಿ ಶತ್ರುರಾಷ್ಟ್ರವಾದ ಚೀನಾ, ಪಾಕಿಸ್ತಾನ ಬೆರಗುಗಣ್ಣಿನಿಂದ ನೋಡುವಂತಾಗಿದೆ. ಅಷ್ಟೇ ಅಲ್ಲ, ಮಿತ್ರರಾಷ್ಟ್ರವಾಗಿರೋ ವಿಶ್ವದ ದೊಡ್ಡಣ್ಣ ಅಮೆರಿಕಾ ಕೂಡ ಕೆಂಗಣ್ಣಿನಿಂದ ನೋಡುತ್ತಿದೆ.

ಭಾರೀ ಸಂಚಲನ ಸೃಷ್ಟಿಸಿದ ಮೋದಿ, ಪುಟಿನ್‌ ಭೇಟಿ
ರಕ್ಷಣಾ ಕ್ಷೇತ್ರ, ಇಂಧನ, ವ್ಯಾಪಾರ ಸೇರಿ 10 ಒಪ್ಪಂದ ಸಾಧ್ಯತೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಆಗಿರಬಹುದು, ರಷ್ಯಾ ಆಗಿರಬಹುದು, ಅಮೆರಿಕಾ ಆಗಿರಬಹುದು ಪಕ್ಕಾ ಲೆಕ್ಕಾಚಾರ ಹಾಕಿಯೇ ವ್ಯವಹಾರಕ್ಕೆ ಇಳಿಯುತ್ತಿವೆ. ಈ ನಡುವೆ ಭಾರತದ ಪ್ರಧಾನಿ ನರೇಂದ್ರ ಮೋದಿ-ರಷ್ಯಾ ಅಧ್ಯಕ್ಷ ಪುಟಿನ್‌ ಪ್ರತಿ ಬಾರಿ ಭೇಟಿಯಾದಾಗಲೂ ದೊಡ್ಡಣ್ಣ ಅಮೆರಿಕಾ ಸೇರಿದಂತೆ ಅತಿರಥ ಮಹಾರಥ ರಾಷ್ಟ್ರಗಳಲ್ಲಿ ಸಂಚಲನ ಸೃಷ್ಟಿಯಾಗುತ್ತೆ. ಆದ್ರೆ, ಈ ಹಿಂದಿನ ಭೇಟಿಗಿಂತ ಈ ಬಾರಿಯ ಭೇಟಿ ಭಾರೀ ಸಂಚಲನ ಸೃಷ್ಟಿಸುತ್ತಿದೆ. ಕಾರಣ ಉಭಯ ರಾಷ್ಟ್ರಗಳ ನಡುವೆ ನಡೆಯಲಿರುವ ಯುದ್ಧಾಸ್ತ್ರಗಳ ಖರೀದಿ, ಇಂಧನ, ವ್ಯಾಪಾರ ಸೇರಿದಂತೆ 10 ಕ್ಕೂ ಹೆಚ್ಚು ದ್ವಿಪಕ್ಷೀಯ ಒಪ್ಪಂದಗಳು. ಯೆಸ್‌, ಇದೇ ನೋಡಿ, ಇಡೀ ವಿಶ್ವವನ್ನು ತಿರುಗಿ ನೋಡುವಂತೆ ಮಾಡಿರೋದು. ಯಾಕಂದ್ರೆ ಇದೇನು ಸಾಮಾನ್ಯ ಒಪ್ಪಂದವಲ್ಲ. ಒಪ್ಪಂದ ಸಾರಾಂಶ ಕೇಳಿದ್ರೆನೇ ವಿರೋಧಿಗಳ ಮೈ ನಡುಗಿ ಹೋಗುತ್ತೆ.

ಇದು, ರಷ್ಯಾ ನಿರ್ಮಿತ ಎಕೆ 203 ರೈಫಲ್‌. ಈ ರೈಫಲ್‌ ವಿಶೇಷತೆ ಕೇಳಿದ್ರೆ ಮೈ ಜುಮ್‌ ಅನಿಸುತ್ತೆ. ಯೆಸ್‌, 3.8 ಕೆಜಿ ತೂಕದ ಈ ರೈಫಲ್‌ ಹಿಡಿದು ಸೈನಿಕರು ಗಡಿಯಲ್ಲಿ ನಿಂತ್ರೆ ಶತ್ರುಗಳು ಗಡಿನುಗ್ಗಲು ಹತ್ತಾರು ಬಾರಿ ಯೋಚಿಸಬೇಕು. ಯಾಕಂದ್ರೆ ಇದೇನು ಸಾಮಾನ್ಯ ಗನ್‌ ಅಲ್ಲ. ಮೂರು ಫುಟ್ಬಾಲ್‌ ಮೈದಾನದಷ್ಟು ದೂರ ಇದ್ರೂ ಕಥೆ ಫಿನೀಶ್‌. ಅಂದ್ರೆ 800 ಮೀಟರ್‌ ದೂರದಲ್ಲಿದ್ರೂ ಶತ್ರು ಭೇಟಿ ಆಡುತ್ತೆ. ಒಂದು ನಿಮಿಷದಲ್ಲಿ 700 ಬುಲೆಟ್‌ಗಳು ಈ ರೈಫಲ್‌ನಿಂದ ಸಿಡಿಯುತ್ತೆ.

ಅಮೇಠಿಯಲ್ಲಿ ಉತ್ಪಾದನೆಯಾಗುತ್ತೆ ಎಕೆ 203 ಗನ್‌
ರೈಫಲ್‌ ಖರೀದಿಗೆ ನಡಯುತ್ತಿದೆ ₹5000 ಕೋಟಿ ಒಪ್ಪಂದ

ಯೆಸ್‌, ಇದೇ ಇದೇ ನೋಡಿ ಒಂದು ಕಡೆ ಶತ್ರುಗಳ ಎದೆ ನಡುಗಿಸುತ್ತಿದ್ರೆ ಮತ್ತೊಂದು ಕಡೆ ಅಮೆರಿಕಾ ಕೂಡ ಕೆಂಗಣ್ಣಿನಿಂದ ನೋಡುವಂತಾಗಿದೆ. ಭಾರತ ರಷ್ಯಾದಿಂದ 7.5 ಲಕ್ಷ ಎಕೆ 203 ರೈಫಲ್‌ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಅದು ಸುಮಾರು 5 ಸಾವಿರ ಕೋಟಿ ಮೌಲ್ಯದ ಒಪ್ಪಂದ. ಬಹುತೇಕ ರೈಫಲ್‌ಗಳು ರಷ್ಯಾದಿಂದ ಭಾರತಕ್ಕೆ ಬರುತ್ತಿದ್ರೆ, ಉಳಿದ ರೈಫಲ್‌ಗಳ ತಯಾರಿಕೆ ಉತ್ತರ ಪ್ರದೇಶದ ಅಮೇಠಿಯಲ್ಲಿಯೇ ಸ್ವದೇಶಿಯಾಗಿ ಉತ್ಪಾದನೆ ಮಾಡಲಾಗುತ್ತಿದೆ. ಉಭಯ ನಾಯಕರ ನಡುವಿನ ದ್ವಿಪಕ್ಷೀಯ ಒಪ್ಪಂದದಲ್ಲಿ ಇದೇ ಹೈಲೆಟ್‌. ಇದರ ಜೊತೆ ಇಂಧನ, ವ್ಯಾಪಾರ ಉದ್ಯಮಕ್ಕೆ ಸೇರಿದ 10 ದ್ವಿಪಕ್ಷೀಯ ಒಪ್ಪಂದ ಏರ್ಪಡಲಿದೆ.

ಮೋದಿ ಪುಟಿನ್‌ ಪ್ರತಿ ಭೇಟಿ ವೇಳೆ ಶತ್ರುಗೆ ಆಘಾತ
ಭಾರತ ಖರೀದಿಸುತ್ತಿದೆ ಭಾರೀ ಪ್ರಮಾಣದ ರಕ್ಷಣಾ ಸಾಮಗ್ರಿ

ಭಾರತ ಮತ್ತು ರಷ್ಯಾ ಎರಡೂ ಬಲಿಷ್ಠ ರಾಷ್ಟ್ರಗಳು. ಅದರಲ್ಲಿಯೂ ಎರಡೂ ರಾಷ್ಟ್ರಗಳ ನಡುವೆ ರಕ್ಷಣಾ ಸಾಮಗ್ರಿಗಳ ಒಪ್ಪಂದ ಭಾರೀ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಹೀಗಾಗಿ ಮೋದಿ-ಪುಟಿನ್‌ ಭೇಟಿಯ ಸುದ್ದಿ ಕೇಳಿದಾಗಲೇ ವಿಶ್ವ ಬೆರಗುಗಣ್ಣಿನಿಂದ ನೋಡಲು ಆರಂಭಿಸಿತ್ತು. ಇದೀಗ ಒಂದೊಂದೆ ವಿಷ್ಯಗಳು ಹೊರ ಬರುತ್ತಿವೆ. ಇದು ಸಹಜವಾಗಿ ಶತ್ರುದೇಶಗಳ ಬೆವರಿಳಿಸಿದ್ರೆ, ಸೂಪರ್‌ ಪವರ್‌ ರಾಷ್ಟ್ರಗಳು ಶಾಕ್‌ನಲ್ಲಿಯೇ ಉಭಯ ನಾಯಕರ ಭೇಟಿಯನ್ನು ಎದುರು ನೋಡುತ್ತಿವೆ.

ರಷ್ಯಾ ಮತ್ತು ಭಾರತದ ನಡುವೆ ತಲೆತಲಾಂತರದಿಂದಲೂ ರಕ್ಷಣಾ ಒಪ್ಪಂದವಿದೆ. ಭಾರತ ಭಾರೀ ಪ್ರಮಾಣದಲ್ಲಿ ಯುದ್ಧಾಸ್ತ್ರಗಳನ್ನು ಖರೀದಿಸುತ್ತಾ ಬರುತ್ತಿದೆ. ಕಳೆದ 30 ವರ್ಷದಲ್ಲಿ ರಷ್ಯಾದಿಂದ ಭಾರತ ಸುಮಾರು 70 ಬಿಲಿಯನ್‌ ಡಾಲರ್‌ನಷ್ಟು ಸಾಮಗ್ರಿಗಳನ್ನು ಖರೀದಿ ಮಾಡಿದೆ. ಅದರಲ್ಲಿ ಸುಕೋಯ್‌ ಸು-30, ಮಿಗ್‌-29 ಫೈಟರ್‌ ಜೆಟ್‌, ಆರ್ಮಿ ಹೆಲಿಕಾಪ್ಟರ್‌, ಕ್ಷಿಪಣಿಗಳು, ಅತ್ಯಾಧುನಿಕ ಮಷಿನ್‌ ಗನ್‌ಗಳು, ಯುದ್ಧ ಟ್ಯಾಂಕರ್‌ಗಳು, ಎಸ್​​​​-400 ಏರ್​ ಡಿಫೆನ್ಸ್​​ ಸಿಸ್ಟಮ್​ ಖರೀದಿಸಿದೆ.

ಮೋದಿ, ಪುಟಿನ್‌ ಭೇಟಿಗೆ ಅಮೆರಿಕಾ ಕೆಂಗಣ್ಣು
ನಿರ್ಬಂಧದ ಪ್ರಸ್ತಾಪಕ್ಕೆ ಕ್ಯಾರೇ ಅನ್ನದ ಭಾರತ

ಪುಟಿನ್‌ ಭಾರತಕ್ಕೆ ಬರುತ್ತಿರುವುದು, ಮೋದಿ-ಪುಟಿನ್‌ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿರುವುದು, ಭಾರೀ ಪ್ರಮಾಣದ ಯುದ್ಧಾಸ್ತ್ರ ಖರೀದಿ ಒಪ್ಪಂದ ನಡೆಯುವುದು…..ಇದ್ಯಾವುದು ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಇಷ್ಟವೇ ಇಲ್ಲ. ಕಳೆದ ಬಾರಿ ಮೋದಿ-ಪುಟಿನ್‌ ಭೇಟಿಯ ವೇಳೆ ಎಸ್‌-400 ಕ್ಷಿಪಣಿ ಖರೀದಿಯ ಒಪ್ಪಂದವಾಗಿತ್ತು. ಅದು ಅಮೆರಿಕಾದ ಕಣ್ಣು ಕೆಂಪಾಗಿಸಿತ್ತು. ಭಾರತದ ಮೇಲೆ ನಿರ್ಬಂಧ ಹೇರುವ ಚಿಂತನೆ ಕೂಡ ಅಮೆರಿಕಾದಲ್ಲಿ ನಡೆದಿತ್ತು. ಆದ್ರೆ, ಅದು ಕೈಗೂಡಲಿಲ್ಲ. ಸ್ವತಃ ಅಮೆರಿಕಾದವರೇ ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ರು. ಈ ನಡುವೆ ಇದೀಗ ಮತ್ತೆ ಮೋದಿ ಪುಟಿನ್‌ ಭೇಟಿ ಅಮೆರಿಕಾದ ಕಣ್ಣು ಕೆಂಪಾಗಿಸಿದೆ.

ಅಮೆರಿಕಾ, ರಷ್ಯಾ ನಡುವೆ ಇದೆ ಶೀತಲ ಸಮರ
ರಷ್ಯಾದಿಂದ ಯುದ್ಧಾಸ್ತ್ರ ಖರೀದಿಸದಂತೆ ಪರೋಕ್ಷ ಒತ್ತಡ

ಅತ್ಯಾಧುನಿಕ ರಕ್ಷಣಾ ಸಾಮಗ್ರಿ ಉತ್ಪಾದಿಸುವಲ್ಲಿ ಅಮೆರಿಕಾ, ರಷ್ಯಾ ಎತ್ತಿದ್ದ ಕೈ. ಜಗತ್ತಿನಲ್ಲಿಯೇ ಅತಿ ಹೆಚ್ಚು ರಕ್ಷಣಾ ಸಾಮಗ್ರಿ ಉತ್ಪಾದನೆ ಮತ್ತು ಮಾರಾಟದಲ್ಲಿ ಈ ಎರಡು ರಾಷ್ಟ್ರಗಳದ್ದೇ ಪಾರುಪತ್ಯ. ಆದ್ರೆ, ಅನಾದಿಕಾಲದಿಂದಲೂ ಈ ಎರಡು ರಾಷ್ಟ್ರಗಳ ನಡುವೆ ವೈರತ್ವವಿದೆ. ಆದು ಆಗಾಗ ಸ್ಫೋಟವಾಗುತ್ತಾ ಇರುತ್ತೆ. ಇದೇ ಕಾರಣಕ್ಕೆ ಅಮೆರಿಕವನ್ನು ಹೆಣೆಯಲು ರಷ್ಯಾ ಹವಣಿಸುತ್ತಿದ್ರೆ, ರಷ್ಯಾವನ್ನು ಇನ್ನಿಲ್ಲದಂತೆ ಮಾಡಲು ಅಮೆರಿಕ ತೆರೆಮರೆಯಲ್ಲಿಯೇ ಕಸರತ್ತು ನಡೆಸುತ್ತಿದೆ. ಇದೇ ಕಾರಣಕ್ಕೆ ಕೆಲವು ರಾಷ್ಟ್ರಗಳ ಅಮೆರಿಕಾ ಬಣ ಸೇರಿಕೊಂಡಿದ್ರೆ, ಇನ್ನು ಕೆಲವಷ್ಟು ರಾಷ್ಟ್ರಗಳು ರಷ್ಯಾ ಬಣ ಸೇರಿಕೊಂಡಿವೆ. ಆದ್ರೆ, ಭಾರತ ಎರಡೂ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯವನ್ನು ಮೊದಲಿಂದಲೂ ಕಾದುಕೊಳ್ಳುತ್ತಾ ಬಂದಿದೆ. ಈಗಲೂ ಕೂಡ ಆ ಬಾಂಧವ್ಯ ಹಾಗೇ ಇದೆ.

ಅಮೆರಿಕಾ ಮತ್ತು ರಷ್ಯಾ ಎರಡೂ ರಾಷ್ಟ್ರಗಳಿಂದ ಭಾರತ ರಕ್ಷಣಾ ಸಾಮಗ್ರಿಯನ್ನು ಭಾರಿ ದೊಡ್ಡ ಪ್ರಮಾಣದಲ್ಲಿಯೇ ಖರೀದಿಸುತ್ತಿದೆ. ಆದ್ರೆ, ಅಮೆರಿಕಾದ ರಕ್ಷಣಾ ಸಾಮಗ್ರಿಗೆ ಹೋಲಿಸಿದ್ರೆ ರಷ್ಯಾದ ಸಾಮಗ್ರಿಗಳು ದರದಲ್ಲಿ ಕಡಿಮೆ, ತಂತ್ರಜ್ಞಾನದ ಗುಣಮಟ್ಟದಲ್ಲಿ ಒಂದು ಕೈ ಮೇಲಿರುತ್ತೆ. ಹೀಗಾಗಿ ಅಮೆರಿಕಾಗಿಂತಲೂ ರಷ್ಯಾದಿಂದಲೇ ಭಾರತ ಹೆಚ್ಚಿನ ರಕ್ಷಣಾ ಸಾಮಗ್ರಿ ಖರೀದಿಸುತ್ತಿದೆ. ಆದ್ರೆ, ಇದು ಅಮೆರಿಕಾದ ಕಣ್ಣನ್ನು ಕೆಂಪಾಗಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾವನ್ನು ಕಟ್ಟಿಹಾಕಬೇಕು ಅನ್ನೋದು ಅಮೆರಿಕಾ ಪ್ಲಾನ್‌. ಇದೇ ಉದ್ದೇಶಕ್ಕೆ ರಷ್ಯಾದಿಂದ ಯುದ್ಧಾಸ್ತ್ರಗಳನ್ನು ಖರೀದಿಸದಂತೆ ಅಮೆರಿಕಾದಿಂದ ಭಾರತದ ಮೇಲೆ ಪರೋಕ್ಷ ಒತ್ತಡವಿದೆ. ಆದ್ರೆ, ಭಾರತ ಮಾತ್ರ ಅದ್ಯಾವುದಕ್ಕೂ ಕ್ಯಾರೇ ಅನ್ನುತ್ತಿಲ್ಲ.

ಅಮೆರಿಕಾ, ರಷ್ಯಾ ಎರಡೂ ರಾಷ್ಟ್ರಕ್ಕೂ ಭಾರತ ಬೇಕು
ಇಲ್ಲೇ ಇದೆ ನೋಡಿ ಅಮೆರಿಕಾ, ರಷ್ಯಾ ನಡುವೆ ಚೆಸ್‌ ಆಟ

ರಷ್ಯಾ ಜೊತೆ ಭಾರತ ಚೆನ್ನಾಗಿದೆ ಅಂತ ಭಾರತವನ್ನು ವಿರೋಧ ಕಟ್ಟಿಕೊಳ್ಳುವ ಪರಿಸ್ಥಿತಿ ಅಮೆರಿಕಾಗೆ ಇಲ್ಲ. ಅದೇ ರೀತಿ ಅಮೆರಿಕಾ ಜೊತೆಗೆ ಭಾರತ ಚೆನ್ನಾಗಿದೆ ಅಂತ ಭಾರತದ ವಿರೋಧ ಕಟ್ಟಿಕೊಳ್ಳಲು ರಷ್ಯಾಗೆ ಸಾಧ್ಯವಿಲ್ಲ. ಹೌದು, ಅಮೆರಿಕಾ ಮತ್ತು ರಷ್ಯಾ ನಡುವೆ ಅದೇನೇ ಶೀತಲ ಸಮರವಿರಲಿ, ಆದ್ರೆ ಅದು ಭಾರತದ ಮೇಲೆ ಆ ರಾಷ್ಟ್ರಗಳು ತೋರಿಸುವಂತಿಲ್ಲ.

ಯೆಸ್‌, ಅಲ್ಲೆ ಅನೇಕ ಲೆಕ್ಕಾಚಾರಗಳು ಇವೆ ನೋಡಿ. ಏಷ್ಯಾದಲ್ಲಿ ಅಮೆರಿಕಾಗೆ ವಿರೋಧ ರಾಷ್ಟ್ರ ಅಂದ್ರೆ ಅದು ಚೀನಾ. ರಷ್ಯಾ ಮಾತ್ತು ಚೀನಾ ನಡುವೆ ಆಪ್ತ ಸಂಬಂಧವಿದೆ. ಯುದ್ಧಾಸ್ತ್ರಗಳ ಖರೀದಿಯ ಒಪ್ಪಂದವಿದೆ. ಹೀಗಾಗಿ ಚೀನಾವನ್ನು ಮಟ್ಟಹಾಕಬೇಕು ಅಂದ್ರೆ ಭಾರತದ ಜೊತೆ ಅಮೆರಿಕಾ ಚೆನ್ನಾಗಿಯೇ ಇರಬೇಕು. ಇದೇ ಕಾರಣಕ್ಕೆ ರಷ್ಯಾ ಜೊತೆ ಭಾರತ ಯುದ್ಧಾಸ್ತ್ರಗಳ ಖರೀದಿ ಒಪ್ಪಂದ ಮಾಡಿಕೊಂಡ್ರೂ ಏನೂ ಮಾಡಲಾಗದ ಸ್ಥಿತಿ ಅಮೆರಿಕಾಗೆ ಇದೆ. ಹಾಗೇ ರಷ್ಯಾಗೆ ಕೂಡ ಭಾರತದ ವಿರೋಧ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ರಷ್ಯಾಗೆ ಯುದ್ಧಾಸ್ತ್ರ, ವ್ಯಾಪಾರ ಸೇರಿದಂತೆ ದೊಡ್ಡ ಮಾರುಕಟ್ಟೆ ಇರೋದೇ ಭಾರತದಲ್ಲಿ. ಒಮ್ಮೆ ಭಾರತದ ವಿರೋಧ ಕಟ್ಟಿಕೊಂಡ್ರೆ ರಷ್ಯಾದ ಆರ್ಥಿಕ ಸ್ಥಿತಿಯೇ ಅಲ್ಲೋಲಾ ಕಲ್ಲೋಲ ಆಗಿ ಬಿಡುತ್ತೆ.

ಮೋದಿ, ಪುಟಿನ್‌ ಭೇಟಿಯನ್ನು ಒಂದು ಕಡೆ ಅಮೆರಿಕಾ ಕೆಂಗಣ್ಣಿನಿಂದ ನೋಡುತ್ತಿದ್ರೆ, ಮತ್ತೊಂದು ಕಡೆ ಚೀನಾ, ಪಾಕಿಸ್ತಾನ ಕೂಡ ಕುತೂಹಲದಿಂದ ನೋಡುತ್ತಿವೆ. ಭಾರತ ಹೊಸ ಹೊಸ ಯುದ್ಧಾಸ್ತ್ರಗಳನ್ನು ಖರೀದಿಸಿದ ತಕ್ಷಣ ಚೀನಾ, ಪಾಕ್‌ಗೆ ಒಂದು ಸೂಚನೆ ಹೋಗುತ್ತೆ. ಈ ಬಾರಿ ಕೂಡ ಅಂತಹವೊಂದು ಸೂಚನೆ ಬಲವಾಗಿಯೇ ಹೋಗಿದೆ.

ಅಮೆರಿಕಾ, ರಷ್ಯಾ ಎಂಬ ಎರಡೂ ಸೂಪರ್‌ ಪವರ್‌ ರಾಷ್ಟ್ರಗಳ ನಡುವೆ ವೈರತ್ಯ ಇರೋದು ಜಗತ್ತಿಗೆ ಗೊತ್ತು. ಆದ್ರೆ, ಆ ವೈರತ್ವದಲ್ಲಿ ಭಾರತದ ವಿರೋಧ ಕಟ್ಟಿಕೊಳ್ಳಲಾಗದು. ಯಾಕಂದ್ರೆ ಸೂಪರ್‌ ಪವರ್‌ ರಾಷ್ಟ್ರಕ್ಕೆ ಸೂಪರ್‌ ಸಾನಿಕ್‌ ಆಗಿದೆ ಭಾರತ.