ಮೈಸೂರು: 'ರಾಹುಲ್ ಅನರ್ಹತೆ ಬಿಜೆಪಿ ಕುತಂತ್ರ' ಎಚ್.ವಿಶ್ವನಾಥ್ ಟೀಕೆ

ಮೈಸೂರು: 'ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಗರಿಷ್ಠಮಿತಿಯ ಶಿಕ್ಷೆ ನೀಡಿರುವುದು ಹಾಗೂ ಸಂಸತ್ ಸದಸ್ಯತ್ವ ರದ್ದತಿ ಪ್ರಕರಣ ಜನತಂತ್ರದ ಅಣಕು, ಅಘೋಷಿತ ತುರ್ತು ಪರಿಸ್ಥಿತಿಯಂತಿದೆ' ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿಯ ಎಚ್.ವಿಶ್ವನಾಥ್ ಟೀಕಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಜೆಪಿಯ ರಾಜಕೀಯ ವಿರೋಧಿಗಳ ದಮನ ನೀತಿಯಿಂದ ಕಾಂಗ್ರೆಸ್ ನಾಯಕತ್ವ ಮತ್ತು ಮುನ್ನಡೆ ಯನ್ನು ತಪ‍್ಪಿಸಲು ಅಸಾಧ್ಯ' ಎಂದರು.
'ಸಂಸತ್‌ನಲ್ಲಿ ಶೇ 54ರಷ್ಟು ಅಪರಾಧ ಹಿನ್ನೆಲೆಯವರು, ಜೈಲಿಗೆ ಹೋಗಿ ಬಂದವರು, ಅತ್ಯಾಚಾರ ಮತ್ತಿತರ ಪ್ರಕರಣಗಳಲ್ಲಿ ಜಾಮೀನಿನಲ್ಲಿ ಹೊರಬಂದವರು ಇದ್ದಾರೆ ಎಂಬ ವರದಿಗಳಿವೆ. ಇವರ ಸದಸ್ಯತ್ವವನ್ನು ಸಂಸದೀಯ ಸಮಿತಿ ರದ್ದುಪಡಿಸಿಲ್ಲ ಏಕೆ' ಎಂದು ಪ್ರಶ್ನಿಸಿದರು.
'ಪ್ರಧಾನಿ ಮೋದಿ ಅವರೇ ಹಲವು ಸಲ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ನೆಹರೂ ಮುಂತಾದ ಕಾಂಗ್ರೆಸ್ ನಾಯಕರನ್ನು ಟೀಕಿಸಿಲ್ಲವೇ? ರಾಹುಲ್ ಅವರನ್ನು ದೇಶದ್ರೋಹಿ ಎಂದಿಲ್ಲವೇ? ಪ್ರಧಾನಿ ಮೋದಿ ಹಾಗೂ ಬಿಜೆಪಿಯನ್ನು ಟೀಕಿಸಿದರೆ ದೇಶದ್ರೋಹಿ, ಪ್ರೀತಿಸಿದರೆ ದೇಶಪ್ರೇಮಿ ಎಂಬಂತಾಗಿದೆ' ಎಂದರು.
ಜೈಲಲ್ಲಿದ್ದು ಬಂದ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ದೇಶದ ಗೃಹಮಂತ್ರಿ, ಬಿಜೆಪಿ ನಾಯಕರು ಹೋಗಿ ತಿಂಡಿ ತಿಂದು ಬಂದಿರುವುದು ಸರಿಯೇ? ಕಾನೂನುಗಳೆಲ್ಲ ಬಿಜೆಪಿಯೇತರರ ಮೇಲೆ ಪ್ರಯೋಗಿಸಲು ಮಾತ್ರ ಇದೆಯೇ, ಕೆಪಿಸಿಸಿ ಅಧ್ಯಕ್ಷರೂ ಸೇರಿದಂತೆ ಇ.ಡಿ., ಸಿಬಿಐ ಮುಂತಾದ ಸಂಸ್ಥೆಗಳ ಮೂಲಕ ಪೀಡಿಸುತ್ತಿರುವುದು ಸರಿಯೇ, ಬಿಜೆಪಿಯವರೂ ಇಂಥ ತಪ್ಪು ಮಾಡಿಲ್ಲವೇ' ಎಂದು ಪ್ರಶ್ನಿಸಿದರು.
'ವಿಶ್ವನಾಥ್ ರಾಜೀನಾಮೆ ನೀಡಿ, ಟೀಕಿಸಲಿ'
'ಎಚ್. ವಿಶ್ವನಾಥ್ ಅವರು ಬಿಜೆಪಿ ನೀಡಿದ ವಿಧಾನ ಪರಿಷತ್ ಸದಸ್ಯತ್ವವನ್ನು ತ್ಯಜಿಸಿ, ಪಕ್ಷದ ಮುಖಂಡರನ್ನು ಟೀಕಿಸಲಿ' ಎಂದು ಬಿಜೆಪಿ ಒಬಿಸಿ ಮೋರ್ಚಾ ಮೈಸೂರು ನಗರ ಘಟಕದ ಅಧ್ಯಕ್ಷ ಜೋಗಿ ಮಂಜು ಸಲಹೆ ನೀಡಿದರು.
ಬಿಜೆಪಿ ಒಬಿಸಿ ಮೋರ್ಚಾ ಹಿಂದುಳಿದ ಸಮುದಾಯಗಳ ಸಮಾವೇಶದ ಮಾಹಿತಿ ನೀಡಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, 'ವಿಶ್ವನಾಥ್ ಅವರು ರಾಜಕೀಯವಾಗಿ ತೀರಾ ಕುಸಿದಿದ್ದಾಗ ಬಿಜೆಪಿ ಹಾಗೂ ಮುಖಂಡರು ಅವರನ್ನು ಕೈಹಿಡಿದು ಮೇಲೆತ್ತಿದರು. ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರು. ಸೋತಾಗ ಎಂಎಲ್‌ಸಿ ಮಾಡಿದರು. ಅಂಥವರನ್ನು ಈಗ ಅಲ್ಲೇ ಇದ್ದು ಟೀಕಿಸುತ್ತಿದ್ದಾರೆ. ವಿಶ್ವನಾಥ್ 'ಹಳ್ಳಿ ಹಕ್ಕಿ' ಅಲ್ಲ ಅವರು 'ಕುಟುಕು ಹಕ್ಕಿ', ನೆರಳು ನೀಡಿದ ಕಲ್ಪವೃಕ್ಷವನ್ನೇ ಕುಟುಕುವ ಹಕ್ಕಿ ಎಂದು ಟೀಕಿಸಿದರು.