ಮಹಿಳಾ ಏಷ್ಯಾಕಪ್ ಹಾಕಿ ಟೂರ್ನಿಗೆ ಭಾರತ ತಂಡ ಪ್ರಕಟ: ಸವಿತಾಗೆ ಸಾರಥ್ಯ

ನವದೆಹಲಿ: ಅನುಭವಿ ಗೋಲ್‌ಕೀಪರ್ ಸವಿತಾ ಪೂನಿಯಾ ಅವರು, ಒಮನ್‌ನ ಮಸ್ಕತ್‌ನಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ. ಟೂರ್ನಿಗಾಗಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ 16 ಆಟಗಾರ್ತಿಯರನ್ನು ಒಳಗೊಂಡ 18 ಮಂದಿಯ ತಂಡವನ್ನು ಬುಧವಾರ ಹಾಕಿ ಇಂಡಿಯಾ ಪ್ರಕಟಿಸಿದೆ.
ತಂಡದ ನಿಯಮಿತ ನಾಯಕಿ ರಾಣಿ ರಾಂಪಾಲ್ ಅವರು ಗಾಯಗೊಂಡಿದ್ದು, ಬೆಂಗಳೂರಿನಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಇದೇ 21ರಿಂದ 28ರವರೆಗೆ ಸುಲ್ತಾನ್ ಕಾಬೂಸ್ ಕ್ರೀಡಾ ಸಂಕೀರ್ಣದಲ್ಲಿ ಏಷ್ಯಾಕಪ್ ಟೂರ್ನಿ ಆಯೋಜನೆಯಾಗಿದೆ. ದೀಪ್ ಗ್ರೇಸ್ ಎಕ್ಕಾ ಅವರನ್ನು ಉಪನಾಯಕಿಯನ್ನಾಗಿ ನೇಮಿಸಲಾಗಿದೆ.
ಭಾರತ ತಂಡವು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜಪಾನ್, ಮಲೇಷ್ಯಾ ಮತ್ತು ಸಿಂಗಪುರ ತಂಡಗಳು ಇದೇ ಗುಂಪಿನಲ್ಲಿವೆ. ಹಾಲಿ ಚಾಂಪಿಯನ್ ಆಗಿರುವ ಸವಿತಾ ನಾಯಕತ್ವದ ತಂಡವು ಟೂರ್ನಿಯ ಮೊದಲ ದಿನ ಮಲೇಷ್ಯಾ ಎದುರು ಸೆಣಸಲಿದೆ. ಬಳಿಕ ಜಪಾನ್ (ಜನವರಿ 23) ಮತ್ತು ಸಿಂಗಪುರ (ಜನವರಿ 24) ತಂಡಗಳಿಗೆ ಮುಖಾಮುಖಿಯಾಗಲಿದೆ.
ಜನವರಿ 26ರಂದು ಸೆಮಿಫೈನಲ್‌ಗಳು ಮತ್ತು 28ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಇಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು 2022ರ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಲಿವೆ. ಸ್ಪೇನ್ ಹಾಗೂ ನೆದರ್ಲೆಂಡ್ಸ್‌ನಲ್ಲಿ ವಿಶ್ವಕಪ್ ನಡೆಯಲಿದೆ.
ತಂಡ ಇಂತಿದೆ: ಗೋಲ್‌ಕೀಪರ್ಸ್: ಸವಿತಾ ಪೂನಿಯಾ (ನಾಯಕಿ), ರಜನಿ ಎತಿಮರ್ಪು.
ಡಿಫೆಂಡರ್ಸ್: ದೀಪ್ ಗ್ರೇಸ್ ಎಕ್ಕಾ (ಉಪನಾಯಕಿ), ಗುರ್ಜಿತ್ ಕೌರ್, ನಿಕ್ಕಿ ಪ್ರಧಾನ್, ಉದಿತಾ.
ಮಿಡ್‌ಫೀಲ್ಡರ್ಸ್: ನಿಶಾ, ಸುಶೀಲಾ ಚಾನು, ಮೋನಿಕಾ, ನೇಹಾ, ಸಲಿಮಾ ಟೆಟೆ, ಜ್ಯೋತಿ,
ನವಜೋತ್ ಕೌರ್.
ಫಾರ್ವರ್ಡ್ಸ್: ನವನೀತ್ ಕೌರ್, ಲಾಲ್‌ರೆಮ್ಸಿಯಾಮಿ, ವಂದನಾ ಕಟಾರಿಯಾ, ಮರಿಯಾನಾ
ಕುಜೂರ್, ಶರ್ಮಿಳಾ ದೇವಿ.
ಕಾಯ್ದಿರಿಸಿದ ಆಟಗಾರ್ತಿಯರು: ದೀಪಿಕಾ ಮತ್ತು ಇಶಿಕಾ ಚೌಧರಿ.