ಸಿಸಿಎಲ್ ಇತಿಹಾಸದಲ್ಲಿ ಒಮ್ಮೆಯೂ ಕಪ್ ಗೆಲ್ಲದೇ ಹಿನ್ನಡೆ ಅನುಭವಿಸಿರುವ 5 ತಂಡಗಳಿವು!

ಸಿಸಿಎಲ್ ಇತಿಹಾಸದಲ್ಲಿ ಒಮ್ಮೆಯೂ ಕಪ್ ಗೆಲ್ಲದೇ ಹಿನ್ನಡೆ ಅನುಭವಿಸಿರುವ 5 ತಂಡಗಳಿವು!

ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಒಂಬತ್ತನೇ ಆವೃತ್ತಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ಶುರುವಾಗಿ ನಿನ್ನೆ ( ಮಾರ್ಚ್ 25 ) ಮುಕ್ತಾಯಗೊಂಡಿದೆ. ನಿನ್ನೆ ವಿಶಾಖಪಟ್ಟಣದ ವೈಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತೆಲುಗು ವಾರಿಯರ್ಸ್ ಹಾಗೂ ಭೋಜ್‌ಪುರಿ ದಬಾಂಗ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ಟೂರ್ನಿ ಅಂತ್ಯಗೊಂಡಿದೆ.

ಈ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡ ಭೋಜ್‌ಪುರಿ ದಬಾಂಗ್ಸ್ ವಿರುದ್ಧ ಮೊದಲ ಇನ್ನಿಂಗ್ಸ್ ಹಾಗೂ ಎರಡನೇ ಇನ್ನಿಂಗ್ಸ್ ಎರಡರಲ್ಲಿಯೂ ಸಹ ದೊಡ್ಡ ಮಟ್ಟದ ಹಿಡಿತ ಸಾಧಿಸಿ ಪಂದ್ಯದಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ತೆಲುಗು ವಾರಿಯರ್ಸ್ ತಂಡ ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಭೋಜ್‌ಪುರಿ ದಬಾಂಗ್ಸ್ ರನ್ನರ್ ಅಪ್ ತಂಡವಾಗಿ ಹೊರಹೊಮ್ಮಿದೆ. ತೆಲುಗು ವಾರಿಯರ್ಸ್ ತಂಡ ನಾಲ್ಕನೇ ಬಾರಿಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟ್ರೋಫಿಯನ್ನು ಎತ್ತಿಹಿಡಿದಿದೆ. ಅತ್ತ ಚೊಚ್ಚಲ ಟ್ರೋಫಿ ಕನಸು ಕಾಣುತ್ತಿದ್ದ ಭೋಜ್‌ಪುರಿ ದಬಾಂಗ್ಸ್ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನಗೊಂಡಿದೆ.

ಇನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಗ್ರೂಪ್ ಹಂತದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ವಿರುದ್ಧ ಸೋಲುವ ಮೂಲಕ ಟೂರ್ನಿಯಲ್ಲಿ ಮೊದಲ ಸೋಲನ್ನು ಕಂಡು ಟೂರ್ನಿಯಿಂದ ಹೊರಬಿತ್ತು.

ಕಳೆದ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಮುಂಬೈ ಹೀರೋಸ್ ಸಹ ಸೆಮಿಫೈನಲ್ ಹಂತದಲ್ಲಿ ಹೊರಬಿತ್ತು. ಭೋಜ್‌ಪುರಿ ದಬಾಂಗ್ಸ್ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಮುಂಬೈ ಹೀರೊಸ್ ಸೆಮಿಫೈನಲ್‌ಗೆ ತನ್ನ ಓಟವನ್ನು ಅಂತ್ಯಗೊಳಿಸಿತ್ತು.

ಉಳಿದಂತೆ ಚೆನ್ನೈ ರೈನೊಸ್, ಬೆಂಗಾಲ್ ಟೈಗರ್ಸ್, ಕೇರಳ ಸ್ಟ್ರೈಕರ್ಸ್ ಹಾಗೂ ಪಂಜಾಬ್ ದೆ ಶೇರ್ ತಂಡಗಳು ಗ್ರೂಪ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದವು. ಹೀಗೆ ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ತಂಡಗಳು ಮೇಲಿನ ರೀತಿ ಸ್ಥಾನಗಳನ್ನು ಪಡೆದುಕೊಂಡಿವೆ. ಇನ್ನು ಕಳೆದ ಬಾರಿ ಮುಂಬೈ ಹೀರೋಸ್ ಚಾಂಪಿಯನ್ ಆಗುವ ಮೂಲಕ ಬಹು ವರ್ಷಗಳಿಂದ ಹೊಂದಿದ್ದ ಟ್ರೋಫಿ ಗೆಲ್ಲಬೇಕೆಂಬ ಕನಸನ್ನು ನನಸು ಮಾಡಿಕೊಂಡಿತ್ತು. ಆದರೆ ಈ ವರ್ಷ ತೆಲುಗು ವಾರಿಯರ್ಸ್ ಟ್ರೋಫಿ ಗೆದ್ದಿದ್ದು, ಟ್ರೋಫಿ ಗೆಲ್ಲದೆ ಇದ್ದ ತಂಡಗಳಾವುವೂ ಟ್ರೋಫಿ ಗೆಲ್ಲಲಾಗಿಲ್ಲ. ಹಾಗಾದರೆ ಸಿಸಿಎಲ್ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಗೆಲ್ಲಲಾಗದೇ ಉಳಿದುಕೊಂಡಿರುವ ತಂಡಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

* 2012ರಿಂದ ಸಿಸಿಎಲ್‌ನಲ್ಲಿ ಭಾಗವಹಿಸುತ್ತಿರುವ ಬೆಂಗಾಲ್ ಟೈಗರ್ಸ್ ತಂಡ ಒಮ್ಮೆಯೂ ಸಹ ಟ್ರೋಫಿಯನ್ನು ಗೆದ್ದಿಲ್ಲ. ಎರಡು ಬಾರಿ ಸೆಮಿಫೈನಲ್ ಸುತ್ತಿಗೆ ಬಂದಿರುವುದೇ ಈ ತಂಡದ ದೊಡ್ಡ ಸಾಧನೆಯಾಗಿದೆ.

* 2013ರಿಂದ ಸಿಸಿಎಲ್ ಆಡುತ್ತಿರುವ ಭೋಜ್‌ಪುರಿ ದಬಾಂಗ್ಸ್ ತಂಡ ಸಹ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಮೂರು ಬಾರಿ ಸೆಮಿಫೈನಲ್ ಹಂತ ತಲುಪಿರುವ ಈ ತಂಡ ಈ ಬಾರಿ ರನ್ನರ್ ಅಪ್ ಆಗಿದೆ.

* 2013ರಿಂದ ಸಿಸಿಎಲ್ ಆಡುತ್ತಿರುವ ಕೇರಳ ಸ್ಟ್ರೈಕರ್ಸ್ ತಂಡ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಕೇರಳ ಸ್ಟ್ರೈಕರ್ಸ್ ತಂಡ ಎರಡು ಬಾರಿ ರನ್ನರ್ ಅಪ್ ಆಗಿದೆ.

* 2016ರಿಂದ ಸಿಸಿಎಲ್ ಆಡುತ್ತಿರುವ ಪಂಜಾಬ್ ದೆ ಶೇರ್ ತಂಡ ಕೇವಲ ಮೂರು ಸೀಸನ್‌ನಲ್ಲಿ ಕಣಕ್ಕಿಳಿದಿದೆ. ಈ ತಂಡ ಈ ಮೂರು ಬಾರಿಯೂ ಗ್ರೂಪ್ ಹಂತಕ್ಕೆ ತೃಪ್ತಿಪಟ್ಟುಕೊಂಡಿದೆ.

* 2013, 2014 ಹಾಗೂ 2015 ಈ ಮೂರು ಸೀಸನ್‌ನಲ್ಲಿ ಮಾತ್ರ ಕಣಕ್ಕಿಳಿದಿದ್ದ ವೀರ್ ಮರಾಠಿ ತಂಡ ನಂತರದ ಸೀಸನ್‌ಗಳಲ್ಲಿ ಆಡಲಿಲ್ಲ. ತನ್ನ ಮೊದಲ ಆವೃತ್ತಿಯಲ್ಲಿ ಸೆಮಿಫೈನಲ್ ಹಂತ ತಲುಪಿದ್ದು ಈ ತಂಡದ ಸಾಧನೆ. ಯಾವ ಬಾರಿಯೂ ತಂಡ ಕಪ್ ಗೆದ್ದಿಲ್ಲ.