ಮದುವೆಯಾದ ಪುರುಷನನ್ನು ಬಂಧಿಸಿದ್ರೆ, ಆಕೆಯ ಪತ್ನಿಯ ಗತಿಯೇನು?: ಅಸ್ಸಾಂ ಬಾಲ್ಯ ವಿವಾಹ ಕ್ರಮದ ವಿರುದ್ಧ ಓವೈಸಿ ಗರಂ

ಹೈದರಾಬಾದ್: ಅಸ್ಸಾಂನಲ್ಲಿ ಬಾಲ್ಯ ವಿವಾಹದ ಆರೋಪದ ಮೇಲೆ ತ್ವರಿತ ಕ್ರಮದ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಜನರ ಬಂಧನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮದುವೆಯಾದ ಪುರುಷನನ್ನು ಬಂಧಿಸಿದರೆ, ಆತನ ಪತ್ನಿಯ ಗತಿಯೇನು? ಅವರನ್ನು ನೋಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಅಸ್ಸಾಂನಲ್ಲಿ ಬಾಲ್ಯ ವಿವಾಹದ ಆರೋಪದ ಮೇಲೆ ಇದುವರೆಗೆ 2211 ಜನರನ್ನು ಬಂಧಿಸಲಾಗಿದೆ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮಾತನಾಡಿ, ಇಡೀ ರಾಜ್ಯದಲ್ಲಿ ಇದುವರೆಗೆ 4,074 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, 8,134 ಜನರನ್ನು ಗುರುತಿಸಲಾಗಿದೆ. ಇಲ್ಲಿಯವರೆಗೆ 2,211 ಮಂದಿಯನ್ನು ಬಂಧಿಸಲಾಗಿದೆ. ಬಾಲ್ಯ ವಿವಾಹದ ವಿರುದ್ಧ ಕ್ರಮ ಮುಂದುವರಿಯಲಿದೆ ಎಂದಿದ್ದರು.
ಆದ್ರೆ, ಅಸ್ಸಾಂ ಸರ್ಕಾರದ ಕ್ರಮಕ್ಕೆ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸ್ಸಾಂನಲ್ಲಿ ಕಳೆದ 6 ವರ್ಷಗಳಿಂದ ಬಿಜೆಪಿ ಸರ್ಕಾರವಿದೆ. ಇದು ನಿಮ್ಮ ವೈಫಲ್ಯ, ನೀವು ಆಗ ಏನು ಮಾಡುತ್ತಿದ್ದೀರಿ? ಇಂತಹ ಬಂಧನಗಳನ್ನು ಮಾಡುವ ಮೂಲಕ ನೀವು ಇನ್ನೊಂದು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದೀರಿ. ಮದುವೆಯಾದ ಪುರುಷರನ್ನು ಬಂಧಿಸಿದರೆ, ಅವರನ್ನು ಮದುವೆಯಾದ ಮಹಿಳೆಯ ಗತಿಯೇನು? ಅವರನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.