ಭಾರತ್ ಜೋಡೋ ಯಾತ್ರೆ ಸಮಾರೋಪಕ್ಕೆ ಪ್ರಮುಖರ ಗೈರು
ಸಾಂಬಾ/ನವದೆಹಲಿ: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಯ ಸಮಾರೋಪ ಜ.30ರಂದು ಶ್ರೀನಗರದಲ್ಲಿ ನಡೆಯಲಿದೆ. ಅದರಲ್ಲಿ ಭಾಗವಹಿಸುವಂತೆ ಪ್ರಮುಖ ಪ್ರತಿಪಕ್ಷಗಳಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನಿಸಿದ್ದರು.
ಟಿಎಂಸಿ, ಸಿಪಿಎಂ, ಎಸ್‌ಪಿ ನಾಯಕರು ಗೈರಾಗುವ ಸಾಧ್ಯತೆಗಳಿವೆ. ಆಪ್, ಭಾರತ್ ರಾಷ್ಟ್ರ ಸಮಿತಿ, ವೈಎಸ್‌ಆರ್ ಕಾಂಗ್ರೆಸ್, ಬಿಜೆಡಿ, ಎಐಯುಡಿಎಫ್, ಅಕಾಲಿ ದಳ ನಾಯಕರಿಗೆ ಆಹ್ವಾನ ನೀಡಲಾಗಿಲ್ಲ.
ಇನ್ನೊಂದೆಡೆ, ಯಾತ್ರೆ ಭಾನುವಾರ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯನ್ನು ಪ್ರವೇಶಿಸಿದೆ. ಶ್ರೀನಗರದಲ್ಲಿ ಶನಿವಾರ ಅವಳಿ ಸ್ಫೋಟ ಉಂಟಾಗಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಸೋಮವಾರ ಅದು ಜಮ್ಮು ಪ್ರವೇಶಿಸಲಿದೆ.
ಲೋಗೋ ರಿಲೀಸ್
ಇದೇ ವೇಳೆ, ಜ.26ರಿಂದ ಆರಂಭವಾಗುವ “ಹಾಥ್ ಸೇ ಹಾಥ್ ಜೋಡೋ’ ಅಭಿಯಾನದ ಲೋಗೋ ಅನ್ನು ಕಾಂಗ್ರೆಸ್ ಶನಿವಾರ ಬಿಡುಗಡೆಗೊಳಿಸಿದೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧದ ಎಂಟು ಪುಟಗಳ ಆರೋಪ ಪಟ್ಟಿಯನ್ನೂ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.