ಭಾರತದಲ್ಲಿ ಕೊರೊನಾ ಹೆಚ್ಚಳ: ಹೀಗಿದ್ದರೂ ಜನರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ, ಏನದು

ನವದೆಹಲಿ, ಮಾರ್ಚ್ 23: ದೇಶಾದ್ಯಂತ ಕೋವಿಡ್ ಪಾಸಿಟಿವ್ ಪ್ರಕರಣಗಳ ಹಠಾತ್ ಏರಿಕೆಯ ಆತಂಕದ ನಡುವೆ ಕೇಂದ್ರ ಆರೋಗ್ಯ ಸಚಿವಾಲಯದ ಮುಖ್ಯಸ್ಥರು ದೇಶದ ಜನರಿಗೆ ಸಿಹಿ ಸುದ್ದಿ ನೀಡಿದೆ. ಜೊತೆಗೆ ಆರೋಗ್ಯ ಬಗ್ಗೆ ನಿರ್ಲಕ್ಷ್ಯಸದೇ ಸೂಕ್ತ ಕಾಳಜಿ ವಹಿಸುವಂತೆಯೂ ಗುರುವಾರ ಸಲಹೆ ನೀಡಿದೆ.
ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿರುವುದು ಕಂಡು ಬಂದಿದೆ. ಆದರೆ ಆಸ್ಪತ್ರೆ ದಾಖಲಾತಿ ಹಾಗೂ ಸೋಂಕಿನಿಂದ ಮರಣ ಹೊಂದುವವರ ಸಂಖ್ಯೆಯಲ್ಲಿ ಏರುಪೇರಾಗಿಲ್ಲ. ಈ ಬಗ್ಗೆ ಹೆಚ್ಚಳ ಕಂಡು ಬಂದಿಲ್ಲ. ಬದಲಾಗಿ ನಿಧಾನವಾಗಿ ಪಸರುತ್ತಿರುವಂತೆ ಕಂಡು ಬರುತ್ತಿದೆ ಎಂದು ಎಚ್ಚರಿಕೆ ನೀಡಿದರು.
ದೇಶದಲ್ಲಿನ ಕೋವಿಡ್-19 ಪರಿಸ್ಥಿತಿಯ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ, ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಜಾಗತಿಕವಾಗಿ ಪ್ರತಿದಿನ ಸರಾಸರಿ 94,000 ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಭಾರತದಲ್ಲಿ ಕೇವಲ 966 ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಇದದು ಜಾಗತಿಕವಾಗಿ ಕೇವಲ ಶೇಕಡಾ 1ರಷ್ಟು ಎಂದು ಅವರು ತಿಳಿಸಿದ್ದಾರೆ.
ಕಳೆದ ತಿಂಗಳು ಫೆಬ್ರವರಿ ಎರಡನೇ ವಾರದಿಂದ ಕೇವಲ 108 ಪ್ರಕರಣಗಳು ವರದಿ ಆದವು. ನಂತರ ಮಾರ್ಚ್ 23 ಕ್ಕೆ ಕೊನೆಗೊಂಡ ವಾರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 966ಕ್ಕೆ ಹೆಚ್ಚಾಯಿತು. ಸದ್ಯ ಇದೇ ಪರಸ್ಥಿತಿ ಮುಂದುವರಿಯುತ್ತದೆ ಎಂಬುದು ಗ್ಯಾರಂಟಿ ಇಲ್ಲ. ಈ ಸಂಬಂಧ ಯಾರೂ ಆತಂಕಪಡಬಾರದು. ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.
ಭಾರತದ ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶ ಸೇರಿ ಒಟ್ಟು ಎಂಟು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳ ದಾಖಲಾತಿ ತುಸು ಏರುಗತಿಯಲ್ಲಿದೆ ಎಂದು ಅವರು ತಿಳಿಸಿದರು.
ಕಳೆದ ಫೆಬ್ರವರಿ ತಿಂಗಳ ಎರಡನೇ ವಾರದಿಂದ ದೇಶದಲ್ಲಿ ಕೋವಿಡ್ ಸೋಂಕು ವ್ಯಾಪಿಸುವ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದಾಗಿ ಕೋವಿಡ್ ಪಾಸಿಟಿವಿಟಿ ದರ ಭಾರತದ್ದು ಶೇಕಡಾ 0.09 ರಿಂದ ಶೇಕಡಾ 1ಕ್ಕೆ ಹೆಚ್ಚಾಗಿದೆ. ಇದು ಕೂಡ ದಾಖಲೆಯ ಮಟ್ಟದ್ದಲ್ಲ. ಸಾಮಾನ್ಯ ಬೆಳವಣಿಗೆ ಎನ್ನಬಹುದಾಗಿದೆ.
ವಯೋವೃದ್ಧರು, ಹಿರಿಯ ನಾಗರಿಕರು, ಅನಾರೋಗ್ಯ ಬಳಲುತ್ತಿರುವವರು, ಗರ್ಭಿಣಿಯರು ಮತ್ತು ಮಕ್ಕಳು ಕೋವಿಡ್ ಸೂಕ್ತ ನಡವಳಿಕೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಜನಸಂದಣಿ ಇರುವ ಸ್ಥಳಗಳಲ್ಲಿ ಮುಖವಾಡವನ್ನು ಧರಿಸಬೇಕು ಎಂದು ಅವರು ಹೇಳಿದರು.
ಪಾಸಿಟಿವ್ ಬಂದ ಪ್ರಕರಣಗಳಲ್ಲಿ ಬಹುತೇಕವುಗಳನ್ನು ಸೋಂಕು ತಳಿ ಸಂಶೋಧನಾ ಪತ್ತೆ ಪ್ರಯೋಗಾಲಯ (ಜೀನೋಮ್ ಸ್ವಿಕ್ಷೆನ್ಸಿಂಗ್ ಲ್ಯಾಬ್) ನಲ್ಲಿನ ತಪಾಸಣೆ ಹೆಚ್ಚಿಸುವ ಬಗ್ಗೆ ಅವರು ರಾಜ್ಯಗಳ ಅಧಿಕಾರಿಗಳನ್ನು ಕೇಳಿದರು. ಪ್ರಸ್ತುತ ದೇಶದಲ್ಲಿ ಕೊರೊನಾ 19ರ ಚಲಾವಣೆಯಲ್ಲಿರುವ ಕೊರೊನಾವು ಅದರ ರೂಪಾಂತರಿ ಓಮಿಕ್ರಾನ್ ವೈರಸ್‌ನ ಉಪ ತಳಿಗಳೇ ಆಗಿವೆ ಎಂದು ಭೂಷರ್ಣ ಅವರು ತಿಳಿಸಿದರು.
ಸಾಂಕ್ರಾಮಿಕ ಹಂತವು ಸ್ಥಳೀಯ ಹಂತವನ್ನು ತಲುಪಿದಾಗ ಹೆಚ್ಚು ಹೆಚ್ಚು ಉಪ ರೂಪಾಂತರಗಳು ಅಭಿವೃದ್ಧಿಗೊಳ್ಳುತ್ತವೆ. XBB1.5 ಮತ್ತು XBB 1.16 ಅನ್ನು ಆಸಕ್ತಿಯ ರೂಪಾಂತರವೆಂದು ಗುರುತಿಸಲಾಗಿದೆ. ಏಕೆಂದರೆ ವೈಜ್ಞಾನಿಕ ಹಿನ್ನೆಲೆಯನ್ನು ನೋಡಿದರೆ ಈ ವೈರಸ್ ಹೆಚ್ಚು ಪಸರುವ ಶಕ್ತಿ ಹೊಂದಿದೆ ಎಂದು ತಿಳಿದು ಬಂದಿದೆ.
XBB 1.16 ಉಪ ರೂಪಾಂತರದ ತೀವ್ರತೆಯನ್ನು ನಿರ್ಣಯಿಸಲು ವೈಜ್ಞಾನಿಕ ಪುರಾವೆಗಳನ್ನು ವಿಶ್ಲೇಷಿಸಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಇರಲಿಲ್ಲ. ಕೊರೊನಾ ಪ್ರಕರಣಗಳ ದಾಖಲಾತಿ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಆಗಿತ್ತು. ಆದಾಗ್ಯೂ, ಕಳೆದ ಕೆಲವು ವಾರಗಳಲ್ಲಿ ನಿರ್ದಿಷ್ಟವಾಗಿ ದೇಶದ ಕೆಲವು ಭಾಗಗಳಲ್ಲಿ ಪ್ರಕರಣಗಳಲ್ಲಿ ಹಠಾತ್ತನೆ ಹೆಚ್ಚಾಗುತ್ತಿದೆ.
ಕೊರೊನಾ ಪ್ರಕರಣಗಳು ಹಂತ ಹಂತವಾಗಿ ಹೆಚ್ಚುತ್ತಿರುವ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಉನ್ನತ ಮಟ್ಟದ ಸಭೆ ನಡೆಸಿ ಆರೋಗ್ಯಾಧಿಕಾರಿಗಳು ಮತ್ತು ತಜ್ಞರು ಜೊತೆ ಚರ್ಚಿಸಿದರು