ಬೇಲಿ ಹಾರಿದರೂ ಗೂಡು ಸೇರದ ಹಕ್ಕಿಗಳು

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಾಂತರ ಚಟುವಟಿಕೆಗಳ ರಹಸ್ಯ ಕಾರ್ಯಾಚರಣೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ನಡೆಯುತ್ತಿದೆ. ಅನ್ಯ ಪಕ್ಷ ಸೇರ್ಪಡೆ ಆಸೆಯಿಂದ ಕೆಲ ವಲಸೆ ಹಕ್ಕಿಗಳು ಬೇಲಿಯಿಂದ ಹಾರಿವೆಯಾದರೂ ಹೊಸ ಗೂಡು ಸೇರುವುದಕ್ಕೆ ಇನ್ನೂ ಮುಹೂರ್ತ ಲಭಿಸಿಲ್ಲ.
ಚುನಾವಣಾ ಬಿಸಿ ಪ್ರಾರಂಭವಾಗುವುದಕ್ಕೆ ಮುನ್ನವೇ ಕೆಲವರು ಹಾಲಿ ಇರುವ ಪಕ್ಷದಿಂದ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದರು. ಆದರೆ ಸೇರ್ಪಡೆ ಕಾರ್ಯಕ್ರಮಕ್ಕೆ ಇನ್ನೂ ಮುಹೂರ್ತ ನಿಗದಿಯಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಆಡಳಿತಾರೂಢ ಬಿಜೆಪಿ ಅಥವಾ ಕಾಂಗ್ರೆಸ್‌ನಿಂದ ಶಾಸಕರ ಪಕ್ಷಾಂತರ ಇನ್ನೂ ಶುರುವಾಗಿಲ್ಲ. ಆದರೆ ಜೆಡಿಎಸ್‌ನಿಂದಲೇ ವಲಸೆ ಆರಂಭವಾಗಿದೆ.
ಕೋಲಾರ ಶಾಸಕ ಶ್ರೀನಿವಾಸ ಗೌಡ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಗುಬ್ಬಿ ಶಾಸಕ ಶ್ರೀನಿವಾಸ್, ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಈಗಾಗಲೇ ಪಕ್ಷ ತೊರೆಯುವ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ. ಅವರು ಕಾಂಗ್ರೆಸ್ ಸೇರ್ಪಡೆ ಗೊಳ್ಳುವುದು ಬಹುತೇಕ ಅಂತಿಮಗೊಂಡಿದೆ. ಕಾಂಗ್ರೆಸ್ ಸೇರುವುದಕ್ಕೆ ಸದ್ಯದ ಮಟ್ಟಿಗೆ ಯಾವುದೇ ಅಡ್ಡಿ ಇಲ್ಲ ಎಂದೇ ಹೇಳಲಾಗುತ್ತಿದೆ. ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬರುತ್ತಿದ್ದಂತೆ ಪಕ್ಷಾಂತರ ಪರ್ವ ಶುರುವಾಗಲಿದೆ.
ಪಕ್ಷಾಂತರಕ್ಕೆ ಸಿದ್ದರಾದವರಲ್ಲಿ ಎಲ್ಲರೂ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಕುಟುಂಬಕ್ಕೆ ಸೆಡ್ಡು ಹೊಡೆದವರೇ ಆಗಿದ್ದಾರೆ. ಈ ಪೈಕಿ ಶಿವಲಿಂಗೇಗೌಡ ಹಾಗೂ ಎ.ಟಿ.ರಾಮಸ್ವಾಮಿ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ. ಶಿವಲಿಂಗೇಗೌಡರೂ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ, ಈ ತಿಂಗಳ ಕೊನೆಯವರೆಗೆ ಮಾತ್ರ ನಾನು ಜೆಡಿಎಸ್ ಶಾಸಕ ಎಂದು ಹೇಳಿಕೊಂಡಿದ್ದಾರೆ. ಗುಬ್ಬಿ ಶ್ರೀನಿವಾಸ್ ಅವರಂತೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯವರಿಗೇ ಸವಾಲು ಹಾಕಿದ್ದಾರೆ. ಕುಮಾರಸ್ವಾಮಿಯವರಿಗೆ ತಾಕತ್ ಇದ್ದರೆ ತಮ್ಮ ವಿರುದ್ಧ ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದಾರೆ. ಇನ್ನು ಶ್ರೀನಿವಾಸ್ ಗೌಡರು ಕುಮಾರ ಸ್ವಾಮಿಯವರ ಬದ್ಧ ವೈರಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ತ್ಯಾಗ ಮಾಡುವುದಕ್ಕಾಗಿಯೇ ಕಾಂಗ್ರೆಸ್ ಸೇರಲಿದ್ದಾರೆ. ಈ ಬಾರಿ ಜೆಡಿಎಸ್‌ನಿಂದ ಒಟ್ಟು 11 ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ನಿರೀಕ್ಷಿ ಸಲಾಗಿತ್ತು. ಕುತೂಹಲಕಾರಿ ಸಂಗತಿ ಎಂದರೆ ಜೆಡಿಎಸ್‌ನ ಭದ್ರಕೋಟೆ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಿಂದಲೇ ಶಾಸಕರು ಪಕ್ಷಾಂತರ ಮಾಡಿದ್ದಾರೆ.
ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬೇರುಗಳು ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಇನ್ನೊಂದೆಡೆ ಬಿಜೆಪಿಯಿಂದ ಶಾಸಕರ ವಲಸೆಗೆ ಇನ್ನೂ ಸಂದರ್ಭ ಸೃಷ್ಟಿಯಾಗಿಲ್ಲ. ಎಚ್.ವಿಶ್ವನಾಥ್ ಕಾಂಗ್ರೆಸ್ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರೂ ಕೈ ಪಾಳಯ ದಿಂದ ಇನ್ನೂ ಕ್ಲಿಯರೆನ್ಸ್ ಸಿಕ್ಕಿಲ್ಲ. ಬಾಂಬೆ ಟೀಂ ಸದಸ್ಯರು ಕೇಸರಿ ಪಾಳಯ ಬಿಟ್ಟು ಕದಲುವ ಸಾಧ್ಯತೆ ಕ್ಷೀಣಿಸಿದೆ.
ಈ ಪೈಕಿ ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ ಮಾತ್ರ ತಮಗೆ ಕಾಂಗ್ರೆಸ್‌ನಿಂದ ಆಹ್ವಾನ ಬಂದಿರುವುದು ಸತ್ಯ. ಖುದ್ದು ನಾರಾಯಣಗೌಡರೇ ಈ ಬಗ್ಗೆ ಮಾತನಾಡಿದ್ದಾರೆ. ಆದರೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಮಾ.11ರಂದು ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಆಗಮಿಸಲಿದ್ದು, ಆ ಕಾರ್ಯಕ್ರಮದ ಉಸ್ತುವಾರಿಯನ್ನು ನಾರಾಯಣ ಗೌಡರೇ ವಹಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಲಸೆ ಹಕ್ಕಿಗಳ ಪಟ್ಟಿಯಲ್ಲಿ ಹೊಸ ಹೆಸರು ಇನ್ನೂ ಸೇರ್ಪಡೆಯಾಗದೇ ಇದ್ದರೂ ವದಂತಿಗಳು ಮಾತ್ರ ಬಲವಾಗಿಯೇ ಹರಿದಾಡುತ್ತಿದೆ.
-ರಾಘವೇಂದ್ರ ಭಟ್