ಬೆಸ್ಕಾಂ' ವ್ಯಾಪ್ತಿಯ 8 ಜಿಲ್ಲೆಗಳ 87 ಹಳ್ಳಿಗಳಲ್ಲಿ 9ನೇ 'ವಿದ್ಯುತ್ ಅದಾಲತ್': 2286 ಗ್ರಾಹಕರು ಭಾಗಿ

ಬೆಸ್ಕಾಂ' ವ್ಯಾಪ್ತಿಯ 8 ಜಿಲ್ಲೆಗಳ 87 ಹಳ್ಳಿಗಳಲ್ಲಿ 9ನೇ 'ವಿದ್ಯುತ್ ಅದಾಲತ್': 2286 ಗ್ರಾಹಕರು ಭಾಗಿ

ಬೆಂಗಳೂರು: ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 87 ಹಳ್ಳಿಗಳಲ್ಲಿ 9 ನೇ ವಿದ್ಯುತ್ ಅದಾಲತ್ ನ್ನು ಶುಕ್ರವಾರ ಆಯೋಜಿಸಲಾಗಿತ್ತು. ವಿದ್ಯುತ್ ಅದಾಲತ್ ನಲ್ಲಿ 2286 ಗ್ರಾಹಕರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನ ಬಗೆಹರಿಸಿಕೊಂಡರು.

ಗ್ರಾಹಕರಿಂದ ಸ್ವೀಕರಿಸಿರುವ 886 ದೂರುಗಳ ಪೈಕಿ 314 ಮನವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಇತ್ಯಾರ್ಥ ಪಡಿಸಿದ್ದು, 572 ಮನವಿಗಳು ಬಾಕಿ ಇದೆ. ಇನ್ನುಳಿದ 350 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಲಾಗಿದೆ. ಇನ್ನೂ 222 ದೂರುಗಳನ್ನು ಸ್ಥಳೀಯವಾಗಿ ಇತ್ಯರ್ಥಪಡಿಸಲು ಸಮಯವಕಾಶ ಬೇಕಾಗಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ಅದಾಲತ್ ನಲ್ಲಿ ಗ್ರಾಹಕರು ತಾವು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಕುರಿತು ನೇರವಾಗಿ ಅಧಿಕಾರಿಗಳ ಮುಂದಿಟ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ನಿಗದಿತ ಸ್ಥಳಗಳಲ್ಲಿ, ನಿಗದಿತ ಸಮಯಕ್ಕೆ ಬೆಸ್ಕಾಂ ಅಧಿಕಾರಿಗಳು, ಇಂಜಿನಿಯರ್, ಸಿಬ್ಬಂದಿಗಳು ಹಾಜರಿದ್ದು ಅಹವಾಲು ಸ್ವೀಕರಿಸುತ್ತಾರೆ. ಜೊತೆಗೆ, ತ್ವರಿತಗತಿಯಲ್ಲಿ ಸಮಸ್ಯೆಯನ್ನು ವಿಲೇವಾರಿ ಮಾಡುತ್ತಾರೆ.

ಇನ್ನೂ ವಿದ್ಯುತ್ ಸಂಪರ್ಕ, ವಿದ್ಯುತ್ ಕಳ್ಳತನ, ಮೀಟರ್, ಹೆಚ್ಚುವರಿ ಟ್ರಾನ್ಸ್ ಫಾರ್ಮರ್, ಬಿಲ್ಲಿಂಗ್, ವಿದ್ಯುತ್ ವ್ಯತ್ಯಯ, ಹೊಸ ಸಂಪರ್ಕ, ಎಲ್ಟಿ ಲೈನ್ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಗ್ರಾಹಕರು ಅದಾಲತ್ನಲ್ಲಿ ಅಧಿಕಾರಿಗಳ ಗಮನ ಸೆಳೆದರು.

ಜೂನ್-2022 ರಿಂದ ಫೆಬ್ರವರಿ-2023 ರವರೆಗೆ ಬೆಸ್ಕಾಂ ವ್ಯಾಪ್ತಿಯಡಿ ನಡೆದ ವಿದ್ಯುತ್ ಅದಾಲತ್ ನಲ್ಲಿ ಒಟ್ಟು 802 ಹಳ್ಳಿಗಳಲ್ಲಿ 23,700 ಗ್ರಾಹಕರು ಭಾಗವಹಿಸಿದ್ದರು. ಗ್ರಾಹಕರಿಂದ ಸ್ವೀಕರಿಸಿರುವ 8681 ದೂರುಗಳ ಪೈಕಿ 2902 ಮನವಿಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಥಳದಲ್ಲೇ ಇತ್ಯಾರ್ಥ ಪಡಿಸಿದ್ದು, ನಂತರದ ದಿನಗಳಲ್ಲಿ 2681 ದೂರುಗಳನ್ನು ಇತ್ಯರ್ಥಪಡಿಸಿದ್ದಾರೆ. ಈ ಪೈಕಿ ಒಟ್ಟು 5583 ದೂರುಗಳನ್ನು ಪರಿಹರಿಸಿದ್ದಾರೆ. 3098 ಮನವಿಗಳು ಬಾಕಿ ಇದ್ದು, ಇನ್ನುಳಿದ 2153 ಮನವಿಗಳನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ರವಾನಿಸಲಾಗಿದೆ. ಇನ್ನೂ 945 ದೂರುಗಳನ್ನು ಸ್ಥಳೀಯವಾಗಿ ಇತ್ಯರ್ಥಪಡಿಸಲು ಸಮಯವಕಾಶ ಬೇಕಾಗಿದೆ ಎಂದು ತಿಳಿಸಿದ್ದಾರೆ.