ಬಿಜೆಪಿ ನಾಯಕನ ಮೇಲೆ ಮುಸ್ಲಿಂ ಕುಟುಂಬ ಸಿಟ್ಟಿಗೆದ್ದಿದ್ದ ಪ್ರಕರಣ ಇದು

ಬಿಜೆಪಿ ನಾಯಕನ ಮೇಲೆ ಮುಸ್ಲಿಂ ಕುಟುಂಬ ಸಿಟ್ಟಿಗೆದ್ದಿದ್ದ ಪ್ರಕರಣ ಇದು

''ಇಂದು ಅಧಿಕ ಕಾಣುತ್ತಿರುವ ಆಧುನಿಕ ಪ್ರಚಾರ ಮಾಧ್ಯಮಗಳು ಕಾಣಿಸಿಕೊಳ್ಳದ ಕಾಲ ಅದು. ಸಾಮಾಜಿಕ ಜಾಲತಾಣಗಳು ಹೆಚ್ಚಾಗಿ ಇರಲಿಲ್ಲ. ಮತದಾರರ ಮನೆಮನೆ ಮತ್ತು ವೈಯಕ್ತಿಕ ಭೇಟಿಗೆ ಅಧಿಕ ಮಹತ್ವ ನೀಡಲಾಗುತ್ತಿತ್ತು. ಚುನಾವಣೆ ಸಂದರ್ಭ ಮುಂಜಾನೆ 6.30ರಿಂದ ರಾತ್ರಿ ಸುಮಾರು 9 ಗಂಟೆ ತನಕ ದಿನಂಪ್ರತಿ 30 ಕಿ.ಮೀ.

ತನಕ ಪಕ್ಷದ ಕಾರ್ಯಕರ್ತರ ಜತೆ ನಡೆಯುತ್ತಿದ್ದೆ….'' ಇದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 1994ರಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಮಾಜಿ ಶಾಸಕ ಎನ್.ಯೋಗೀಶ್ ಭಟ್ ಅವರು ಚುನಾವಣಾ ಪ್ರಚಾರ ಕಾಲದ ಹಳೇ ನೆನಪುಗಳನ್ನು ನೆನಪಿಸಿಕೊಂಡ ಪರಿ.

''ಆಗ ಬಿದಿರು, ಅಡಕೆ ಮರಗಳಿಂದ ಪ್ರಮುಖ ಬೀದಿಗಳಲ್ಲಿ ಎತ್ತರದಲ್ಲಿ ಪಕ್ಷದ ಅಭ್ಯರ್ಥಿಗೆ ಮತ ಕೇಳುವ ದೊಡ್ಡ ಫಲಕಗಳನ್ನು ಹಾಕಲಾಗುತ್ತಿತ್ತು. ತಂಪು ಪಾನೀಯಗಳ ಅಲ್ಯೂಮಿನಿಯಂ ಮುಚ್ಚಳಗಳಿಂದ ಡಾಂಬರು ರಸ್ತೆಯಲ್ಲೇ ಪಕ್ಷದ ಚಿಹ್ನೆ ಬರೆಯಲಾಗುತ್ತಿತ್ತು. ಇದು ನನ್ನ ಚುನಾವಣೆ ಆರಂಭದ ದಿನಗಳ ನೆನಪು. ದಾರಿಯಲ್ಲಿ ಎದುರಾದ ಮುಸ್ಲಿಂ ಕುಟುಂಬದ ಜತೆ ಕುಶಲೋಪರಿ ಮಾತನಾಡುತ್ತಾ ಮತ ಕೇಳಿದೆವು. ಸಿಟ್ಟಿಗೆದ್ದ ಓರ್ವ ಹಿರಿಯರು, ಮುಸ್ಲಿಮರನ್ನು ದ್ವೇಷಿಸುವ ಆರೆಸ್ಸೆಸ್, ಬಿಜೆಪಿಯವರಿಗೆ ನಾವು ಯಾಕೆ ಮತ ನೀಡಬೇಕು ಎಂದು ಜೋರು ಗದ್ದಲಕ್ಕೆ ನಿಂತರು. ರಸ್ತೆಯಲ್ಲಿ ಮಾತನಾಡುವುದು ಬೇಡ. ನಿಮ್ಮ ಮನೆಗೆ ಹೋಗೋಣ ಎಂದು ನಾನು ಅವರನ್ನು ವಿನಂತಿಸಿದೆ. ಮನೆ ತಲುಪಿದ ಬಳಿಕ, ಸ್ವಲ್ಪ ಚಹಾ ಇಡಿ. ಅದನ್ನು ಕುಡಿದುಕೊಂಡೇ ಮಾತನಾಡೋಣ ಎಂದೆ. ತುಂಬಾ ಸಂತೋಷಪಟ್ಟರು. ಬಿಜೆಪಿ ಮತ್ತು ಆರೆಸ್ಸೆಸ್ ಬಗ್ಗೆ ಆ ಕುಟುಂಬದಲ್ಲಿ ಇದ್ದ ತಪ್ಪು ಅಭಿಪ್ರಾಯಗಳನ್ನು ನಾವು ಹೋಗಲಾಡಿಸಿದೆವು. ಆ ಮುಸ್ಲಿಂ ಕುಟುಂಬ ಇಂದಿಗೂ ವೈಯಕ್ತಿಕವಾಗಿ ನನ್ನ ಜತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದೆ'' ಎಂದು ನೆನಪಿಸಿಕೊಳ್ಳುತ್ತಾರೆ ಯೋಗೀಶ್ ಭಟ್