ಪ್ರಧಾನಿ ಮೋದಿ' ಒಬ್ಬ ಮಹಾನ್ ರಾಜಕಾರಣಿ, ರಾಜನೀತಿಜ್ಞ ; ಗುಲಾಂ ನಬಿ ಆಝಾದ್
ನವದೆಹಲಿ : ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಿದ ಗುಲಾಂ ನಬಿ ಆಜಾದ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರನ್ನ ಶ್ಲಾಘಿಸಿದ್ದಾರೆ. 50 ವರ್ಷಗಳಿಂದ ಕಾಂಗ್ರೆಸ್ಸಿಗರಾಗಿರುವ ಗುಲಾಂ ನಬಿ ಆಜಾದ್, ನರೇಂದ್ರ ಮೋದಿಯವರ ನಡವಳಿಕೆ ಒಬ್ಬ ಮಹಾನ್ ರಾಜಕಾರಣಿಯಂತಿದೆ ಎಂದು ಹೇಳಿದರು.
ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಬಿ, 'ನಾನು ಮೋದಿಯವರಿಗೆ ಕ್ರೆಡಿಟ್ ನೀಡಲು ಬಯಸುತ್ತೇನೆ. ನಾನು ಅವರಿಗೆ ಏನೇ ಮಾಡಿದರೂ, ಅವ್ರು ಸ್ನೇಹಪರರಾಗಿದ್ದಾರೆ. ಸಿಎಎ, ಹಿಜಾಬ್ ವಿವಾದ ಮತ್ತು 370ನೇ ವಿಧಿಯಂತಹ ವಿಷಯಗಳ ಬಗ್ಗೆ ವಿರೋಧ ಪಕ್ಷದ ನಾಯಕನಾಗಿ ನಾನು ಅವರನ್ನ ಸುತ್ತುವರೆದಿದ್ದೆ. ಆದರೆ ಪ್ರಧಾನಿ ಮೋದಿ ಎಂದಿಗೂ ಸೇಡಿನ ಭಾವನೆಯಿಂದ ವರ್ತಿಸಲಿಲ್ಲ. ಅವರು ಯಾವಾಗಲೂ ರಾಜಕಾರಣಿಯಂತೆ ವರ್ತಿಸುತ್ತಿದ್ದರು' ಎಂದು ಹೇಳಿದರು.
ಕಾಂಗ್ರೆಸ್ನ ಅತೃಪ್ತ ಜಿ -23 ನಾಯಕರು ಬಿಜೆಪಿಯ ಮುಖವಾಡಗಳಾಗಿದ್ದಾರೆ ಎಂಬ ಆರೋಪಗಳ ಬಗ್ಗೆ ಗುಲಾಂ ನಬಿ ಆಜಾದ್ ಮಾತನಾಡಿದ್ದು, ಇದು ಅಸಂಬದ್ಧ ಎಂದು ಹೇಳಿದರು. ಒಂದು ವೇಳೆ ಜಿ-23 ಬಿಜೆಪಿ ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದರೆ, ಕಾಂಗ್ರೆಸ್ ಅವರನ್ನ ಸಂಸದರನ್ನಾಗಿ ಮಾಡಬಹುದಿತ್ತೇ.? ಅವರನ್ನ ಸಂಸದ, ಪ್ರಧಾನ ಕಾರ್ಯದರ್ಶಿ ಮತ್ತು ಇತರ ಹುದ್ದೆಗಳಲ್ಲಿ ಏಕೆ ಇರಿಸಲಾಯಿತು? ನಾನು ಬೇರ್ಪಟ್ಟು ಪಕ್ಷವನ್ನ ರಚಿಸಿದ ಏಕೈಕ ವ್ಯಕ್ತಿ. ಇತರರು ಇಂದಿಗೂ ಇದ್ದಾರೆ. ಇಂತಹ ಆರೋಪಗಳು ಬಾಲಿಶ ಮತ್ತು ದುರುದ್ದೇಶದಿಂದ ಕೂಡಿವೆ. ಇನ್ನು ಗುಲಾಂ ನಬಿ ಆಜಾದ್ ಅವರು ಬಿಜೆಪಿಗೆ ಹತ್ತಿರವಾಗಿದ್ದಾರೆ ಎಂಬ ಆರೋಪಗಳನ್ನ ತಳ್ಳಿಹಾಕಿದರು.
ಅಂದ್ಹಾಗೆ, ಗುಲಾಂ ನಬಿ ಆಜಾದ್ ಕಳೆದ ವರ್ಷ ಕಾಂಗ್ರೆಸ್ ಜೊತೆಗಿನ ಸಂಬಂಧವನ್ನ ಕಡಿದುಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮದೇ ಆದ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಕ್ಷವನ್ನ ಸ್ಥಾಪಿಸಿದರು. ಅವರು ಪಕ್ಷವನ್ನು ತೊರೆಯುವಾಗ ಕಾಂಗ್ರೆಸ್'ನ ದುಃಸ್ಥಿತಿಗೆ ರಾಹುಲ್ ಗಾಂಧಿಯನ್ನ ದೂಷಿಸಿದ್ದರು. 2013ರಲ್ಲಿ ರಾಹುಲ್ ಗಾಂಧಿ ಹರಿದು ಹಾಕಿದ ಸುಗ್ರೀವಾಜ್ಞೆ ತನ್ನ ವರ್ಚಸ್ಸಿಗೆ ಕಳಂಕ ತಂದಿದೆ ಎಂದು ಆಜಾದ್ ಹೇಳಿದ್ದರು. ಗುಲಾಮ್ ನಬಿ ಆಜಾದ್ ಅವರು ಕಾಂಗ್ರೆಸ್ ಮುಖಸ್ತುತಿ ಮತ್ತು ವೃದ್ಧರನ್ನ ದೂರವಿಡಲು ಪ್ರಾಮುಖ್ಯತೆ ನೀಡುತ್ತಿದೆ ಎಂದು ಆರೋಪಿಸಿದ್ದರು. ಅವರು ಸೋನಿಯಾ ಗಾಂಧಿ ಅವರ ಹೆಸರಿನಲ್ಲಿ ಬರೆದ ರಾಜೀನಾಮೆ ಪತ್ರದಲ್ಲಿ ಈ ಎಲ್ಲಾ ಆರೋಪಗಳನ್ನ ಮಾಡಿದ್ದರು.