ವೀಲ್ ಚೇರ್ ನಲ್ಲೆ ಕುಳಿತು ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಡಾ|ಬಿ.ಎಂ.ಹೆಗ್ಡೆ

ನವದೆಹಲಿ: ಹಿರಿಯ ವೈದ್ಯ ಮತ್ತು ಶಿಕ್ಷಣ ತಜ್ಞ ಡಾ|ಬೆಳ್ಳೆ ಮೋನಪ್ಪ ಹೆಗಡೆ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಪದ್ಮವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
83 ರ ಹರೆಯದ ಹಿರಿಯ ವೈದ್ಯರಾಗಿರುವ ಡಾ|ಬಿ.ಎಂ.ಹೆಗ್ಡೆ ಉಡುಪಿಯ ಬೆಳ್ಳೆ ಗ್ರಾಮದವರು. ಹಿರಿಯಡಕದಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಮುಗಿಸಿ, ಉಡುಪಿಯ ಎಂಜಿಎಮ್ ಕಾಲೇಜ್ ನಲ್ಲಿ ಇಂಟರಮೀಡಿಯೇಟ್ ಶಿಕ್ಷಣವನ್ನು ಮುಗಿಸಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಎಂಬಿಬಿಎಸ್ ಪದವಿಯನ್ನು 1960 ರಲ್ಲಿ ಪಡೆದರು.
ಹೃದ್ರೋಗ ತಜ್ಞರಾಗಿ, ಸಂಶೋಧಕರಾಗಿ, ಬರಹಗಾರರಾಗಿ, ಲೇಖಕರಾಗಿ, ಶಿಕ್ಷಣ ತಜ್ಞರಾಗಿ, ಉಪಕುಲಪತಿಗಳಾಗಿ, ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಡಾ|ಬಿ.ಸಿ.ರಾಯ್ ಪ್ರಶಸ್ತಿಯನ್ನು 1999ರಲ್ಲಿ ಪಡೆದ ಡಾ|ಹೆಗ್ಡೆಯವರಿಗೆ ಭಾರತ ಸರಕಾರವು 2010ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿತ್ತು. ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಗಳಾದ ಹೆಗ್ಡೆಯವರು ಪ್ರಸ್ತುತ ಭಾರತೀಯ ವಿದ್ಯಾಭವನ ಮಂಗಳೂರು ಘಟಕದ ಮುಖ್ಯಸ್ಥರಾಗಿರುವರು.
ಡಾ|ಬಿ.ಎಂ.ಹೆಗ್ಡೆಅವರು ಸ್ವತಂತ್ರವಾಗಿ ನಡೆಯುವ ಶಕ್ತಿ ಹೊಂದಿದ್ದು, ವಾರ್ಧಕ್ಯದಿಂದ ಹೊಸ ಜಾಗದಲ್ಲಿ ನಡೆಯುವುದು ಕಷ್ಟವಾಗಬಹುದು, ರಾಷ್ಟ್ರಪತಿ ಭವನದ ಶಿಸ್ತಿಗೆ ಭಂಗವಾಗಬಹುದು ಎಂದು ಅವರು ವೀಲ್ ಚೇರ್ ನಲ್ಲಿ ಕುಳಿತು ಪ್ರಶಸ್ತಿ ಸ್ವೀಕರಿಸಿದ್ದಾರೆ ಹೊರತು ಇನ್ಯಾ ವುದೇ, ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ಅವರ ಆಪ್ತರು ಉದಯವಾಣಿಗೆ ತಿಳಿಸಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಅವರು ಇಂದೂ ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಹಲವು ಸಾಧಕರಿಗೆ ಸೋಮವಾರ ಪದವಿ ಪ್ರದಾನ ಮಾಡಲಾಗಿತ್ತು