ರಾಜ್ಯಸಭೆಯಲ್ಲಿನ ಹಿಂಸಾಚಾರ : ಉದ್ದೇಶಿತ ತನಿಖಾ ಸಮಿತಿಯಿಂದ 'ದೂರ ಉಳಿಯಲು' ಕಾಂಗ್ರೆಸ್ ನಿರ್ಧಾರ
ನವದೆಹಲಿ : ಮುಂಗಾರು ಅಧಿವೇಶನದ ವೇಳೆ ಕಲಾಪದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ರಚಿಸಲಾಗಿರುವ ತನಿಖಾ ಸಮಿತಿಯ ಭಾಗವಾಗಲು ಕಾಂಗ್ರೆಸ್ ನಿರಾಕರಿಸಿದೆ
ಈ ಕುರಿತಂತೆ ರಾಜ್ಯಸಭೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದು, 2021 ರ ಆಗಸ್ಟ್ 11 ರಂದು ಸದನದಲ್ಲಿ ನಡೆದ ಘಟನೆಗಳ ಕುರಿತು ತನಿಖಾ ಸಮಿತಿ ರಚಿಸುವುದು, ಸಂಸದರನ್ನು ಬೆದರಿಸಲು ಮೌನವಾಗಿ ವಿನ್ಯಾಸಗೊಳಿಸಿದಂತೆ ತೋರುತ್ತದೆ. ಇದು ಜನಪ್ರತಿನಿಧಿಗಳ ಧ್ವನಿಯನ್ನು ನಿಗ್ರಹಿಸುತದೆ. ಅಲ್ಲದೇ ಸರ್ಕಾರಕ್ಕೆ ಅನಾನುಕೂಲವಾಗಿರುವ ಎಲ್ಲವನ್ನು ಉದ್ದೇಶಪೂರ್ವಕವಾಗಿ ದೂರವಿಡುತ್ತದೆ. ಹೀಗಾಗಿ ತಾವು ನಿಸ್ಸಂದಿಗ್ಧವಾಗಿ ವಿಚಾರಣಾ ಸಮಿತಿ ರಚನೆಯನ್ನು ವಿರೋಧಿಸುತ್ತೇವೆ. ಈ ಸಮಿತಿಯ ನಾಮ ನಿರ್ದೇಶನಕ್ಕಾಗಿ ಪಕ್ಷದಿಂದ ಸದಸ್ಯರ ಹೆಸರನ್ನು ಪ್ರಸ್ತಾಪಿಸುವ ಪ್ರಶ್ನೆಯು ಉದ್ಭವಿಸುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇನ್ನು ದೇಶದ ಆರ್ಥಿಕತೆ, ರೈತರ ಪ್ರತಿಭಟನೆ, ಹಣದುಬ್ಬರ, ತೈಲ ಬೆಳೆ ಏರಿಕೆ, ನಿರುದ್ಯೋಗ ಸೇರಿದಂತೆ ಪ್ರಮುಖ ವಿಷಯಗಳ ಕುರಿತ ಚರ್ಚೆಗೆ ಕಾಂಗ್ರೆಸ್ ನೋಟಿಸ್ ನೀಡಿದರೂ, ತಮ್ಮ ಬೇಡಿಕೆಯನ್ನು ಸರ್ಕಾರ ಪರಿಗಣಿಸಿಲ್ಲ. ಚರ್ಚೆ ಇಲ್ಲದೇ ಅನೇಕ ಬಿಲ್ ಗಳು, ನೀತಿಗಳನ್ನು ಅಂಗೀಕರಿಸಲಾಗಿದೆ. ಈ ಸಂಬಂಧ ಇತರ ಪ್ರತಿಪಕ್ಷಗಳ ಜೊತೆಗೆ ಮಾತನಾಡಿದ್ದು, ಬಹುತೇಕ ಎಲ್ಲಾ ಪಕ್ಷಗಳು ಉದ್ದೇಶಿತ ತನಿಖಾ ಸಮಿತಿ ರಚನೆಯನ್ನು ತಿರಸ್ಕರಿಸಿವೆ ಎಂತಲೂ ಪತ್ರದಲ್ಲಿ ಹೇಳಿದ್ದಾರೆ…