ನೇಣು ಬಿಗಿದ ಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಶವ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಶವ ಪತ್ತೆ

ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯ ಗಿಡ್ನಹಳ್ಳಿಯಿಂದ ಕಾಣಿಯಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ಸೋಮವಾರದಂದು ಶಿಡ್ಲಘಟ್ಟ ತಾಲೂಕಿನ ಶಿಲೆಮಾಕಲಹಳ್ಳಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕುಟುಂಬ ಸದಸ್ಯರು ಕೊಲೆಯ ಶಂಕೆ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಗಿಡ್ನಹಳ್ಳಿ ಗ್ರಾಮದ ನವೀನ್ ಎಂಬಾತನ ಮೃತದೇಹ ಪತ್ತೆಯಾಗಿದೆ. ಕುಟುಂಬ ಸದಸ್ಯರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಂಶಯ ವ್ಯಕ್ತಪಡಿಸಿ ದೂರು ದಾಖಲಿಸಿದ್ದಾರೆ.

ಗಿಡ್ನಹಳ್ಳಿ ಗ್ರಾಮದ ನವೀನ್ ಅವರ ಪತ್ನಿ ಅಖಿಲಾ ಗ್ರಾಮ ಪಂಚಾಯತಿ ಸದಸ್ಯೆ ಆಗಿದ್ದು ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡುವ ವಿಚಾರದಲ್ಲಿ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇತ್ತೀಚೆಗೆ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ನವೀನ್ ತನ್ನ ಆಪ್ತ ಸ್ನೇಹಿತರ ಬಳಿ ಹೇಳಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಆದರೆ ಇಂದು ಶಿಡ್ಲಘಟ್ಟ ತಾಲ್ಲೂಕಿನ ಶಿಲೆಮಾಕಲಹಳ್ಳಿ ಸಮೀಪ ನವೀನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಏನಿದು ಪ್ರಕರಣ?

ಗ್ರಾಮದಲ್ಲಿ ರಸ್ತೆ ಮಾಡುವ ವಿಚಾರದಲ್ಲಿ ಮೃತಪಟ್ಟಿರುವ ನವೀನ್ ಮತ್ತು ನರಸಿಂಹಪ್ಪ ಎಂಬುವರ ಮಧ್ಯೆ ಜಗಳ ನಡೆದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೋಲಿಸರು ಠಾಣೆಯಲ್ಲಿ ಮಾತುಕತೆ ನಡೆಸಿ ರಾಜಿ ಮಾಡಿ ಕಳುಹಿಸಿರೆನ್ನಲಾಗಿದೆ ಜೊತೆಗೆ ಗ್ರಾಮದಲ್ಲಿ ಪಂಚಾಯಿತಿ ಸಹ ನಡೆದಿದೆ. ಆದರೇ ಶನಿವಾರದಿಂದ ನವೀನ್ ಮನೆಯಿಂದ ಹೊರಹೋಗಿ ಪುನಃ ವಾಪಸ್ಸು ಬಾರದಿದ್ದಾಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು ಸೋಮವಾರಂದು ಶಿಡ್ಲಘಟ್ಟ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನವೀನ್‍ನ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಲಿಯಾಖತ್ತುಲ್ಲಾ ಮತ್ತು ಸಿಬ್ಬಂದಿ ಭೇಟಿ ನೀಡಿ ಕುಟುಂಬ ಸದಸ್ಯರ ದೂರಿನ ಮೇರೆಗೆ ಗಿಡ್ನಹಳ್ಳಿ ಗ್ರಾಮದ ನರಸಿಂಹಪ್ಪ,ಮಂಜುನಾಥ್ ಮತ್ತಿತರರ ವಿರುಧ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.