ನಟ ಭಯಂಕರ' ಮೊದಲ 3 ದಿನಗಳಲ್ಲಿ ಮಾಡಿದ ನಿಜವಾದ ಕಲೆಕ್ಷನ್ ಎಷ್ಟು?

ಬಿಗ್ ಬಾಸ್ ಮೂಲಕ ಖ್ಯಾತಿಯನ್ನು ಪಡೆದುಕೊಂಡ ಪ್ರಥಮ್ ನಂತರದ ದಿನಗಳಲ್ಲಿ ನಟನಾಗಿ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. 2018ರಲ್ಲಿ ಎಂಎಲ್‌ಎ ಎಂಬ ಚಿತ್ರದಲ್ಲಿ ನಟಿಸಿದ್ದ ಪ್ರಥಮ್ ಅದೇ ವರ್ಷ ದೇವ್ರಂತ ಮನುಷ್ಯ ಎಂಬ ಚಿತ್ರದಲ್ಲೂ ಸಹ ನಟಿಸಿದರು. ಈ ಎರಡೂ ಸಿನಿಮಾಗಳೂ ಸಹ ಹೇಳಿಕೊಳ್ಳುವಂತಹ ಹೆಸರು ಮಾಡಲಿಲ್ಲ.
ಹೀಗೆ ಪ್ರಥಮ್ ನಾಯಕನಾಗಿ ನಟಿಸಿದ ಮೊದಲ ಎರಡೂ ಚಿತ್ರಗಳೂ ಸಹ ನಿರೀಕ್ಷೆ ಮುಟ್ಟುವಲ್ಲಿ ವಿಫಲ ಹೊಂದಿದ ಬಳಿಕ ಹಲವು ತಿಂಗಳುಗಳ ಕಾಲ ಪ್ರಥಮ್ ನಾಯಕನಾಗಿ ನಟಿಸಿದ ಯಾವ ಚಿತ್ರಗಳೂ ಸಹ ಸೆಟ್ಟೇರಲಿಲ್ಲ. ಮೊದಲೆರಡು ಚಿತ್ರಗಳಲ್ಲಿ ಬೇರೆಯವರ ನಿರ್ದೇಶನದಡಿಯಲ್ಲಿ ನಟಿಸಿದ್ದ ಪ್ರಥಮ್ ತಮ್ಮ ಮೂರನೇ ಚಿತ್ರವನ್ನು ತಾವೇ ರಚಿಸಿ ನಿರ್ದೇಶಿಸುವ ಸಾಹಸಕ್ಕೆ ಕೈಹಾಕಿದರು.
ಹೌದು, ಪ್ರಥಮ್ ನಟ ಭಯಂಕರ ಎಂಬ ಶೀರ್ಷಿಕೆ ಅಡಿಯಲ್ಲಿ ಎಂಟರ್‌ಟೈನಿಂಗ್ ಸಿನಿಮಾವೊಂದನ್ನು ರಚಿಸಿ ಅದರಲ್ಲಿ ಸ್ವತಃ ತಾವೇ ನಾಯಕನಾಗಿಯೂ ನಟಿಸಿದರು. ಈ ಚಿತ್ರ ಕಳೆದ ಶುಕ್ರವಾರವಷ್ಟೇ ( ಫೆಬ್ರವರಿ 3 ) ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ಪ್ರಥಮ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಈ ಚಿತ್ರವನ್ನು ವೀಕ್ಷಿಸಿದ ಸಿನಿ ರಸಿಕರ ಪೈಕಿ ಕೆಲವರು ಚಿತ್ರ ಕಾಮಿಡಿ ಎಂಟರ್‌ಟೈನರ್ ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಚಿತ್ರ ಅಷ್ಟಕ್ಕಷ್ಟೇ ಎಂದು ವಿಮರ್ಶಿಸಿದ್ದಾರೆ. ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವ ನಟ ಭಯಂಕರ ಚಿತ್ರ ಮೊದಲ ಮೂರು ದಿನಗಳಲ್ಲಿ ಎಷ್ಟು ಕೋಟಿ ಗಳಿಸಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
ಚಿತ್ರ ಮೂರು ದಿನಗಳಲ್ಲಿ ಗಳಿಸಿದ್ದಿಷ್ಟು
ನಟ ಭಯಂಕರ ಚಿತ್ರ ಬಿಡುಗಡೆಯ ದಿನ ಎಷ್ಟು ಗಳಿಕೆ ಮಾಡಿತು ಹಾಗೂ ಮೊದಲ ವಾರಾಂತ್ಯಕ್ಕೆ ಎಷ್ಟು ಸಂಪಾದಿಸಿತು ಎಂಬ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ ಪ್ರತಿ ಸಿನಿಮಾದಂತೆ ಈ ಸಿನಿಮಾದ ಕಲೆಕ್ಷನ್ ಬಗ್ಗೆಯೂ ಸಹ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಮಾಹಿತಿ ಹಂಚಿಕೊಂಡಿದ್ದು ಚಿತ್ರ ಮೊದಲ ಮೂರು ದಿನಗಳಲ್ಲಿ ಎಷ್ಟು ಗಳಿಸಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿವೆ. ಇನ್ನು ಭಾರತದ ಅತಿ ನಂಬುಗೆಯ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್ ತಾಣವಾದ ಸ್ಯಾಕ್‌ನಿಕ್ ನೀಡಿರುವ ಮಾಹಿತಿ ಪ್ರಕಾರ ನಟ ಭಯಂಕರ ಚಿತ್ರ ಮೊದಲ ದಿನ 15 ಲಕ್ಷ ರೂಪಾಯಿಗಳನ್ನು ಗಳಿಸಿದ್ದು, ಎರಡನೇ ದಿನ 30 ಲಕ್ಷ ರೂಪಾಯಿಗಳನ್ನು ಗಳಿಸಿದೆ ಹಾಗೂ ಮೂರನೇ ದಿನ 45 ಲಕ್ಷ ರೂಪಾಯಿಗಳನ್ನು ಗಳಿಸಿದ್ದು, ಮೊದಲ ಮೂರು ದಿನಗಳಲ್ಲಿ ಒಟ್ಟಾರೆ 90 ಲಕ್ಷ ರೂಪಾಯಿಗಳನ್ನು ಗಳಿಸಿದೆ ಎಂದು ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಫೇಕ್ ಕಲೆಕ್ಷನ್ ವೈರಲ್
ಇನ್ನು ನಟ ಭಯಂಕರ ಚಿತ್ರ ಮೊದಲ ದಿನವೇ 35.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಪೋಸ್ಟರ್ ಹರಿದಾಡಿತ್ತು. ಈ ಮೂಲಕ ನಟ ಭಯಂಕರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಬಿಡುಗಡೆ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆಯನ್ನು ಬರೆದಿದೆ ಎಂಬ ಪೋಸ್ಟ್ ವೈರಲ್ ಆಗಿತ್ತು. ಆದರೆ ಇದ್ಯಾವುದೂ ಸಹ ನಿಜವಲ್ಲ ಫೇಕ್. ಈ ಕುರಿತು ಪ್ರಥಮ್ ಸಹ ಟ್ವೀಟ್ ಮಾಡುವ ಮೂಲಕ ತನ್ನ ಚಿತ್ರದ ಕಲೆಕ್ಷನ್ ಬಗ್ಗೆ ಹರಿದಾಡುತ್ತಿರುವುದು ನಿಜವಲ್ಲ ಎಂದು ಸ್ಪಷ್ಟನೆ ನೀಡಿದರು.
ಚಿತ್ರ ನೋಡುವಂತೆ ಮನವಿ ಮಾಡಿದ ಪ್ರಥಮ್ಒಂದೆಡೆ ಪ್ರಥಮ್ ಚಿತ್ರದ ಕುರಿತಾಗಿ ಎಷ್ಟೆಷ್ಟೋ ಗಳಿಸಿದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿದ್ದರೆ, ಮತ್ತೊಂದೆಡೆ ಪ್ರಥಮ್ ತಮ್ಮ ಚಿತ್ರವನ್ನು ನೋಡುವಂತೆ ಅಭಿಮಾನಿಗಳಲ್ಲಿ ಕಣ್ಣೀರು ಹಾಕಿ ಮನವಿ ಮಾಡಿಕೊಂಡಿದ್ದಾರೆ. ತುಂಬಾ ಕಷ್ಟಪಟ್ಟು ಈ ಚಿತ್ರವನ್ನು ಮಾಡಿದ್ದೇನೆ ಎಂದು ವಿಡಿಯೊ ಮಾಡುವ ಮೂಲಕ ಪ್ರಥಮ್ ಸಿನಿ ರಸಿಕರಲ್ಲಿ ಚಿತ್ರ ನೋಡಿ ಎಂದು ಕೇಳಿಕೊಂಡಿದ್ದರು