ನಟ ಪುನೀತ್ಗಾಗಿ 500 ಕಿ.ಮೀ. ಓಟಕ್ಕೆ ಮುಂದಾದ 3 ಮಕ್ಕಳ ತಾಯಿ! ಇವರ ಮಾತು ಕೇಳಿದ್ರೆ ಮನಸ್ಸು ಭಾರ
ಧಾರವಾಡ: ಮೂರು ಮಕ್ಕಳ ತಾಯಿಯೊಬ್ಬರು ನಟ ಪುನೀತ್ ರಾಜ್ಕುಮಾರ್ ಅವರ ನೆನಪಿಗಾಗಿ 500 ಕಿ.ಮೀ. ಓಟಕ್ಕೆ ಮುಂದಾಗಿದ್ದಾರೆ.
ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದಾಕ್ಷಾಯಣಿ ಉಮೇಶ ಪಾಟೀಲ ಎಂಬುವರಿಗೆ ಪುನೀತ್ ರಾಜ್ಕುಮಾರ್ ಅಂದ್ರೆ ತುಂಬಾ ಇಷ್ಟ.
ಈ ಕುರಿತು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾಕ್ಷಾಯಿಣಿ, ನಾನು ಮೂರು ಮಕ್ಕಳ ತಾಯಿ. ನನ್ನ ಓರ್ವ ಪುತ್ರಿಯ ವಯಸ್ಸಿನ್ನೂ 11 ತಿಂಗಳು. ಬಾಲ್ಯದಿಂದ ಪುನೀತ್ ರಾಜಕುಮಾರ್ ಅಭಿಮಾನಿಯಾಗಿ ಬೆಳೆದಿದ್ದೇನೆ. ಅವರ ಹಠಾತ್ ನಿಧನದಿಂದ ಬಹಳ ದುಃಖಿತಳಾಗಿದ್ದೇನೆ. ಅವರು ಮಾಡಿದ ಸಮಾಜ ಸೇವೆಗಳಿಂದ ಪ್ರೇರೇಪಿತಳಾಗಿ ನೇತ್ರದಾನ ಮತ್ತು ರಕ್ತದಾನ ಶಿಬಿರಗಳನ್ನು ಪ್ರೋತ್ಸಾಹಿಸಲು ನಿರ್ಧಾರ ಕೈಗೊಂಡಿದ್ದೇನೆ. ಬಾಲ್ಯದಿಂದ ಓಟದಲ್ಲಿ ಆಸಕ್ತಳಾಗಿದ್ದು, ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದೇನೆ. ಕ್ರೀಡೆಯ ಮೂಲಕವೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅದಕ್ಕಾಗಿ ಧಾರವಾಡದಿಂದ ಬೆಂಗಳೂರಿನಲ್ಲಿರುವ ಅವರ ಸಮಾಧಿವರೆಗೆ ಓಡಲು ನಿಶ್ಚಯಿಸಿದ್ದೇನೆ. ಇದಕ್ಕೆ ಕುಟುಂಬ, ಸಂಬಂಧಿಕರು ಹಾಗೂ ಗ್ರಾಮಸ್ಥರ ಪ್ರೋತ್ಸಾಹವಿದೆ ಮನಗುಂಡಿ ಗ್ರಾಮದಿಂದ ನ.29ರಂದು ಓಟ ಆರಂಭಿಸುತ್ತೇನೆ ಎಂದರು.