ದೆಹಲಿಯ ʻಲೀಲಾ ಪ್ಯಾಲೇಸ್ ಹೋಟೆಲ್ʼಗೆ 23 ಲಕ್ಷ ರೂ. ವಂಚಿಸಿದ್ದ ವ್ಯಕ್ತಿ ಮಂಗಳೂರಿನಲ್ಲಿ ಸೆರೆ

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನ ನಿವಾಸಿ ಮತ್ತು ಅಬುಧಾಬಿಯ ರಾಜಮನೆತನದ ಉದ್ಯೋಗಿ ಎಂದು ನಟಿಸಿ ವ್ಯಕ್ತಿಯೊಬ್ಬ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ₹ 23 ಲಕ್ಷಕ್ಕೂ ಹೆಚ್ಚು ಮೊತ್ತದ ಬಾಕಿ ಬಿಲ್ ಪಾವತಿಸದೇ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಯನ್ನು ದಕ್ಷಿಣ ಕನ್ನಡ ಮೂಲದ ಮಹಮದ್ ಷರೀಫ್ (41) ಎಂದು ಗುರುತಿಸಲಾಗಿದೆ. ಈತ ತನ್ನ ನಕಲಿ ದಾಖಲೆಗಳನ್ನು ಸಲ್ಲಿಸಿ ಕಳೆದ ವರ್ಷ ಸುಮಾರು ಮೂರು ತಿಂಗಳ ಕಾಲ ಲೀಲಾ ಪ್ಯಾಲೇಸ್ ಹೋಟೆಲ್ನಲ್ಲಿ ತಂಗಿದ್ದ. ಇದರ ಒಟ್ಟಾರೆ ಹೋಟೆಲ್ ಬಿಲ್ 23.46 ಲಕ್ಷ ರೂ. ಆಗಿತ್ತು. ಆದ್ರೆ, ಷರೀಫ್ ಬಿಲ್ ಪಾವತಿ ಮಾಡದೇ, ಹೊಟೇಲ್ನ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದ.
ಈ ಸಂಬಂಧ ಹೋಟೆಲ್ನ ಜನರಲ್ ಮ್ಯಾನೇಜರ್ ಅನುಪಮ್ ದಾಸ್ ಗುಪ್ತಾ ಜನವರಿ 14 ರಂದು ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಎಫ್ಐಆರ್ ದಾಖಲಿಸಿದ್ದರು.
ದೂರಿನ ಆಧಾರದ ಮೇಲೆ ತಲೆಮರೆಸಿಕೊಂಡಿದ್ದ ಆರೋಪಿ ಷರೀಫ್ ಅನ್ನು ಜನವರಿ 19 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.