ಪ್ರೇಯಸಿ ಭೇಟಿಯಾಗಲು ಗಡಿ ದಾಟಿ ಬಂದ ಪಾಕ್ ಯುವಕ ಅರೆಸ್ಟ್

ಪ್ರೇಯಸಿ ಭೇಟಿಯಾಗಲು ಗಡಿ ದಾಟಿ ಬಂದ ಪಾಕ್ ಯುವಕ ಅರೆಸ್ಟ್

ಪಾಕಿಸ್ತಾನದ ಯುವಕ ಹಾಗೂ ಮುಂಬೈ ಯುವತಿಯ ನಡುವಿನ ದೂರದ ಸಂಬಂಧವೊಂದು ಆಂಟಿ ಕ್ಲೈಮ್ಯಾಕ್ಸ್‌ನಲ್ಲಿ ಅಂತ್ಯಗೊಂಡಿದೆ. ತನ್ನ ಮನದನ್ನೆಯನ್ನು ಕಾಣಲು ಭಾರತಕ್ಕೆ ಗಡಿ ದಾಟಿಕೊಂಡು ಅಕ್ರಮವಾಗಿ ಪ್ರವೇಶಿಸಲು ನೋಡುತ್ತಿದ್ದ ಪಾಕ್ ಯುವಕನನ್ನು ಬಿಎಸ್‌ಎಫ್‌ ಯೋಧರು ಬಂಧಿಸಿದ್ದಾರೆ.

ಸದ್ಯ ಬಿಎಸ್‌ಎಫ್‌ ಸಿಬ್ಬಂದಿ ಈ ಯುವಕನನ್ನು ತನಿಖೆಗೆ ಒಳಪಡಿಸಿದ್ದಾರೆ.

ವರದಿಗಳ ಪ್ರಕಾರ; ಮೊಹಮ್ಮದ್ ಅಹ್ಮರ್‌ ಹೆಸರಿನ ಈ ಯುವಕ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಶೇರ್ಪುರ ಹಾಗೂ ಕೈಲಾಶ್ ಪೋಸ್ಟ್‌ಗಳ ನಡುವೆ ಇದ್ದ ಶೂನ್ಯ ರೇಖೆ ದಾಟಿದ್ದಾನೆ. ಶ್ರೀ ಗಂಗಾನಗರದ ಬಳಿಯ ಅನೂಪ್‌ಘಡದ ಬಳಿ ಹೀಗೆ ಗಡಿ ದಾಟಿದ ಅಹ್ಮರ್‌ ಅಲ್ಲಿಂದ ತಾರ್ಬಂದಿ ಎಂಬ ಜಾಗಕ್ಕೆ ತೆರಳಿದ್ದಾನೆ.

ತಾನು ಪಾಕಿಸ್ತಾನದ ಬಹಾವಲ್ಪುರದ ನಿವಾಸಿ ಎಂದು ತನಿಖೆ ವೇಳೆ ಹೇಳಿಕೊಂಡಿರುವ ಮೊಹಮ್ಮದ್ ಬಳಿ ಪಾಕಿಸ್ತಾನದ ಕರೆನ್ಸಿ ನೋಟುಗಳು ಹಾಗೂ ಮೊಬೈಲ್ ಫೋನ್‌ ಅನ್ನು ಪಡೆಯಲಾಗಿದೆ.

ತಾನು ಮುಂಬೈ ಯುವತಿಯೊಬ್ಬಳೊಂದಿಗೆ ಸ್ನೇಹ ಬೆಳೆಸಿದ್ದು, ಆ ಸ್ನೇಹ ಪ್ರೇಮವಾಗಿ ತಿರುಗಿದೆ ಎಂದು ಹೇಳುವ ಮೊಹಮ್ಮದ್, ತನ್ನ ಮನದನ್ನೆಯನ್ನು ಭೇಟಿ ಮಾಡಲು ಗಡಿ ದಾಟಿ ಮುಂಬೈಯತ್ತ ಸಾಗುತ್ತಿದ್ದಿದ್ದಾಗಿ ತಿಳಿಸಿದ್ದಾನೆ.