ಸದ್ಯಕ್ಕೆ ಸಂಪುಟ ವಿಸ್ತರಣೆಯಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟ ಸಂದೇಶ

ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ವರಿಷ್ಠರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು.
ಸದ್ಯಕ್ಕೆ ನಾವು ವಿಧಾನ ಪರಿಷತ್ ಚುನಾವಣೆ ಕುರಿತಷ್ಟೇ ಗಮನ ಕೊಡುತ್ತಿದ್ದೇವೆ. ಸಂಪುಟ ವಿಸ್ತರಣೆ ಬಗ್ಗೆ ನಮ್ಮ ಮುಂದೆ ಯಾವುದೆ ಪ್ರಸ್ತಾಪ ಇಲ್ಲ. ನಮ್ಮ ಮೊದಲ ಆದ್ಯತೆ ಏನಿದ್ದರೂ ಪರಿಷತ್ ಚುನಾವಣೆ ಮೇಲಿದೆ. ನಂತರ ಅಧಿವೇಶನ ನಡೆಯುತ್ತೆ. ಅಧಿವೇಶನ ಮುಗಿದ ಮೇಲೆ ವರಿಷ್ಠರ ಸಲಹೆ ಪಡೆದು ಸಂಪುಟ ವಿಸ್ತರಣೆ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇತ್ತೀಚೆಗೆ ಸುಳಿವು ಕೊಟ್ಟಿದ್ದರು. ಸಚಿವ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು? ಯಾರನ್ನು ಕೈಬಿಡಬೇಕು ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತೀರ್ಮಾನಿಸಲಿದ್ದಾರೆ ಎಂದು ದಾವಣಗೆರೆಯಲ್ಲಿ ಸುದ್ದಿಗಾರರ ಜತೆ ಮಾತನಾಡುವಾಗ ಹೇಳಿದ್ದರು.
ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಜೆಡಿಎಸ್ ನಿಲುವಿನ ಬಗ್ಗೆ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಬೇಕು ಎಂದರು. ಜೆಡಿಎಸ್ ನಿಲುವನ್ನು ಜೆಡಿಎಸ್ ವರಿಷ್ಠರು ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಹೇಳಬೇಕಾಗುತ್ತದೆ ಎಂದರು. ಇದೇ ವೇಳೆ ನಾನು ಬಿಜೆಪಿ ಸೇರದ ಹಿನ್ನೆಲೆ ನನ್ನ ಮೇಲೆ ದಾಳಿ ಮಾಡಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ನೋ ಕಮೆಂಟ್ಸ್ ಎನ್ನುವ ಮೂಲಕ ಅವರ ಎಲ್ಲ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಬೇಕಿಲ್ಲ ಎಂದು ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.