ತವರಿಗೆ ಮರಳಿದ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ಬಿಸಿಸಿಐನಿಂದ ಸಂದೇಶ

ತವರಿಗೆ ಮರಳಿದ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್‌ಗೆ ಬಿಸಿಸಿಐನಿಂದ ಸಂದೇಶ

ಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಟೆಸ್ಟ್ ಸರಣಿಯ ಮಧ್ಯದಲ್ಲಿ ತವರಿಗೆ ವಾಪಾಸಾಗಿದ್ದಾರೆ. ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ಯಾಟ್ ಕಮ್ಮಿನ್ಸ್ ಭಾರತಕ್ಕೆ ಬಂದಿ ತಂಡ ಸೇರಿಕೊಳ್ಳುವ ನಿರೀಕ್ಷೆಯಿತ್ತಾದರೂ ಆ ಸಾಧ್ಯತೆ ಇಲ್ಲ ಎಂಬುದನ್ನು ಸ್ವತಃ ಪ್ಯಾಟ್ ಕಮ್ಮಿನ್ಸ್ ದೃಢಪಡಿಸಿದ್ದಾರೆ.

ಹೀಗಾಗಿ 3ನೇ ಟೆಸ್ಟ್ ಪಂದ್ಯದಿಂದ ಪ್ಯಾಟ್ ಕಮ್ಮಿನ್ಸ್ ಹೊರಗುಳಿಯಲಿದ್ದಾರೆ.

ಪ್ಯಾಟ್ ಕಮ್ಮಿನ್ಸ್ ತಾಯಿ ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಕುಟುಂಬದ ಜೊತೆಗೆ ಇರಲು ಕಮ್ಮಿನ್ಸ್ ಬಯಸಿದ್ದು ಇದಕ್ಕೆ ಆಸ್ಟ್ರೇಲಿಯಾ ತಂಡ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಬೆಂಬಲ ಸೂಚಿಸಿದೆ. ಇದೀಗ ಬಿಸಿಸಿಐ ಕೂಡ ಆಸ್ಟ್ರೇಲಿಯಾ ನಾಯಕನಿಗೆ ವಿಶೇಷ ಸಂದೇಶವನ್ನು ಕಳುಹಿಸಿದೆ.

"ಸದ್ಯ ನಾನು ಭಾರತಕ್ಕೆ ಮರಳದಿರಲು ನಿರ್ಧರಿಸಿದ್ದೇನೆ. ಇಲ್ಲಿ ಕುಟುಂಬದೊಂದಿಗೆ ಇರುವುದು ಸೂಕ್ತ ಎಂದು ನಾನು ಭಾವಿಸಿದ್ದೇನೆ. ಕ್ರಿಕೆಟ್ ಆಸ್ಟ್ರೇಲಿಯಾ ಹಾಗೂ ನನ್ನ ತಂಡದ ಸಹ ಆಟಗಾರರಿಂದ ದೊರೆತ ಬೆಂಬಲಕ್ಕೆ ನಾನು ಆಭಾರಿ. ನನ್ನ ಸ್ಥಿತಿ ಅರ್ಥ ಮಾಡಿಕೊಂಡಿರುವುದಕ್ಕೆ ಧನ್ಯವಾದ" ಎಂದಿದ್ದಾರೆ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್.

ಪ್ಯಾಟ್ ಕಮ್ಮಿನ್ಸ್ ಅಲಭ್ಯತೆಯಲ್ಲಿ ತಂಡದ ಉಪನಾಯಕ ಸ್ಟೀವ್ ಸ್ಮಿತ್ ಇಂದೋರ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಪ್ಯಾಟ್ ಕಮ್ಮಿನ್ಸ್‌ವೆ ಯಾವುದೇ ಕ್ಷಣದಲ್ಲಾದರೂ ತಂಡವನ್ನು ಸೇರಿಕೊಳ್ಳಲು ಅವಕಾಶವಿದ್ದರೂ ಅಹ್ಮದಾಬಾದ್‌ನಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯಕ್ಕೂ ಕಮ್ಮಿನ್ಸ್ ಸೇರಿಕೊಳ್ಳುವುದು ಅನುಮಾನವಾಗಿದೆ. ಹೀಗಾಗಿ ಸರಣಿಯ ಉಳಿದ ಎರಡು ಪಂದ್ಯಗಳಲ್ಲಿಯೂ ಸ್ಟೀವ್ ಸ್ಮಿತ್ ನಾಯಕನಾಗಿ ಮುನ್ನಡೆಸುವುದು ಬಹುತೇಕ ಖಚಿತ.

ಇನ್ನು ಸ್ಟೀವ್ ಸ್ಮಿತ್ 2014ರಿಂದ 2018ರವರೆಗೆ ಆಸ್ಟ್ರೇಲಿಯಾ ತಂಡದ ಖಾಯಂ ನಾಯಕನಾಗಿದ್ದು ಈ ಅವಧಿಯಲ್ಲಿ 34 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 2021ರಲ್ಲಿ ಆಸ್ಟ್ರೇಲಿಯಾ ತಂಡದ ಉಪನಾಯಕನಾಗಿ ನೇಮಕವಾದ ಸ್ಟೀವ್ ಸ್ಮಿತ್ ಪ್ಯಾಟ್ ಕಮ್ಮಿನ್ಸ್ ಅಲಭ್ಯತೆಯಲ್ಲಿ ಕೆಲ ಸಂದರ್ಭಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ಇನ್ನು ಆಸ್ಟ್ರೇಲಿಯಾ ತಂಡ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಸಾಕಷ್ಟು ಗಾಯದ ಸಮಸ್ಯೆಗೆ ಒಳಗಾಗಿದೆ. ಈಗ ಸ್ವತಃ ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಮೂರನೇ ಟೆಸ್ಟ್‌ಗೆ ಅಲಭ್ಯವಾಗುತ್ತಿರುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದಕ್ಕೂ ಮುನ್ನ ಜೋಶ್ ಹೇಜಲ್‌ವುಡ್ ಹಾಗೂ ಡೇವಿಡ್ ವಾರ್ನರ್ ಗಾಯದ ಕಾರಣದಿಂದಾಗಿ ತವರಿಗೆ ವಾಪಸಾಗಿದ್ದರು.