ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ರಿಷಬ್ ಪಂತ್‌ ಬದಲೀ ಆಟಗಾರ ಆಯ್ಕೆ: ಸೌರವ್ ಗಂಗೂಲಿ ಹೇಳಿದ್ದೇನು?

ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ರಿಷಬ್ ಪಂತ್‌ ಬದಲೀ ಆಟಗಾರ ಆಯ್ಕೆ: ಸೌರವ್ ಗಂಗೂಲಿ ಹೇಳಿದ್ದೇನು?

ಪಿಎಲ್ 2023ರ ಆರಂಭಕ್ಕೆ ಇನ್ನು ಒಂದು ತಿಂಗಳ ಸಮಯವಷ್ಟೆ ಬಾಕಿ ಉಳಿದಿದೆ. ಒಂಬತ್ತು ಫ್ರಾಂಚೈಸಿಗಳು 2023ರ ಆವೃತ್ತಿಗಾಗಿ ತಮ್ಮ ತಂಡದ ನಾಯಕನ ಹೆಸರನ್ನು ಘೋಷಿಸಿವೆ. ಈ ಬಾರಿ ಪಂಜಾಬ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಹೊಸದಾಗಿ ನಾಯಕನ ಹೆಸರಿಸಿವೆ.

ಇತ್ತೀಚೆಗೆ ತಾನೆ ಸನ್‌ರೈಸರ್ಸ್ ಹೈದರಾಬಾದ್ ತಮ್ಮ ತಂಡದ ನಾಯಕನಾಗಿ ಏಡೆನ್ ಮಾರ್ಕ್ರಾಮ್ ಅವರನ್ನು ನಾಯಕರನ್ನಾಗಿ ಘೋಷಿಸಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಾತ್ರ ಇನ್ನೂ ನಾಯಕನ ಹೆಸರನ್ನು ಘೋಷಣೆ ಮಾಡಿಲ್ಲ.

ತಂಡದ ನಾಯಕ ರಿಷಬ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಡಿದ್ದು ಅವರು ಕನಿಷ್ಠ ಒಂದು ವರ್ಷ ಕ್ರಿಕೆಟ್‌ನಿಂದ ದೂರವುಳಿಯಲಿದ್ದಾರೆ. ಪಂತ್ ಅಲಭ್ಯತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಮಸ್ಯೆಯನ್ನು ಹೆಚ್ಚಿಸಿದೆ.

ರಿಷಬ್ ಪಂತ್‌ಗೆ ಬದಲೀ ಆಟಗಾರನ ಹೆಸರನ್ನು ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಹೆಸರಿಸಿಲ್ಲ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡೆಲ್ಲಿ ಕ್ಯಾಪಿಟಲ್ಸ್‌ನ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಪಂತ್‌ಗೆ ಬದಲೀ ಆಟಗಾರನ ಹೆಸರಿಸಲು ಇನ್ನಷ್ಟು ಸಮಯ ಬೇಕು ಎಂದು ಹೇಳಿದ್ದಾರೆ.

ಲೆಕ್ಕಾಚಾರ ಮಾಡಲು ಸಮಯ ಬೇಕು

ಐಪಿಎಲ್ ಆರಂಭಕ್ಕೆ ಇನ್ನೂ ಒಂದು ತಿಂಗಳೂ ಬಾಕಿ ಉಳಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ನಿರ್ಧಾರ ಮಾಡುವುದಾಗಿ ಗಂಗೂಲಿ ತಿಳಿಸಿದ್ದಾರೆ. ಅಭಿಷೇಕ್ ಪೊರೆಲ್ ಮತ್ತು ಶೆಲ್ಡನ್ ಜಾಕ್ಸನ್ ಮುಂಚೂಣಿಯಲ್ಲಿ ಕೇಳಿಬರುತ್ತಿದ್ದು, ಪಂತ್ ಬದಲಿಗೆ ಇವರಿಬ್ಬರಲ್ಲಿ ಯಾರು ತಂಡಕ್ಕೆ ಸೇರುತ್ತಾರೆ ಎಂದು ನೋಡಬೇಕಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಸದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮೂರು ದಿನಗಳ ಪೂರ್ವ ಋತುವಿನ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗಂಗೂಲಿ, "ಪಂತ್ ಬದಲೀ ಆಟಗಾರನ ಬಗ್ಗೆ ನಿರ್ಣಯ ಮಾಡಲು ಇನ್ನೂ ಸ್ವಲ್ಪ ಸಮಯ ಬೇಕಾಗಿದೆ. ಐಪಿಎಲ್‌ಗಿಂದ ಮೊದಲು ಇನ್ನೊಂದು ಶಿಬಿರ ನಡೆಯಲಿದ್ದು, ಆ ವೇಳೆಗೆ ಬದಲೀ ಆಟಗಾರನ ಆಯ್ಕೆ ಮಾಡಲಾಗುತ್ತದೆ" ಎಂದು ಗಂಗೂಲಿ ಹೇಳಿದರು.

ಗಾಯಗೊಂಡಿರುವ ಸರ್ಫರಾಜ್ ಖಾನ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮತ್ತೊಬ್ಬ ಪ್ರಮುಖ ಆಟಗಾರ ಸರ್ಫರಾಜ್ ಖಾನ್ ಕೂಡ ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಇದೇ ಕಾರಣಕ್ಕೆ ಅವರು ಮಾರ್ಚ್ 1ರಿಂದ ಆರಂಭವಾಗಲಿರುವ ಇರಾನಿ ಕಪ್‌ಗಾಗಿ ಶೇಷ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ.

"ಐಪಿಎಲ್ ಆರಂಭಕ್ಕೆ ಇನ್ನೊಂದು ತಿಂಗಳು ಬಾಕಿಯಿದೆ. ನಾಲ್ಕೈದು ಮಂದಿ ಇರಾನಿ ಟ್ರೋಫಿ ಪಂದ್ಯದಲ್ಲಿ ಆಡುತ್ತಿದ್ದಾರೆ. ಸರ್ಫರಾಜ್‌ ಖಾನ್‌ ಬೆರಳಿಗೆ ಗಾಯವಾಗಿದೆ, ಅದೃಷ್ಟವಶಾತ್ ಬೆರಳು ಮುರಿದಿಲ್ಲ" ಎಂದು ಗಂಗೂಲಿ ಹೇಳಿದ್ದಾರೆ.

2023ರ ಐಪಿಎಲ್ ಪಂದ್ಯಾವಳಿ ಮಾರ್ಚ್ 31ರಿಂದ ಆರಂಭವಾಗಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಏಪ್ರಿಲ್ 1ರಂದು ಆಡಲಿದೆ.