ಡಿ.17 ರಂದು ರಾಜ್ಯಾದ್ಯಂತ ಶಾಲಾ ಕಾಲೇಜು ಬಂದ್ ಗೆ 'NSUI' ಕರೆ
ಬೆಂಗಳೂರು : ತರಾತುರಿಯಲ್ಲಿ NEP (ರಾಷ್ಟ್ರೀಯ ಶಿಕ್ಷಣ ನೀತಿ) ಜಾರಿ ವಿರೋಧಿಸಿ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಡಿ.17 ರಂದು ಶಾಲಾ ಕಾಲೇಜು ಬಂದ್ ಗೆ NSUI ಕರೆ ನೀಡಿದೆ.
ವಿದ್ಯಾರ್ಥಿ ವೇತನ, ಸಾರಿಗೆ ವ್ಯವಸ್ಥೆ, ಫಲಿತಾಂಶ ವಿಳಂಬ, ಉಚಿತ ಬಸ್ ಪಾಸ್ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.17ರಂದು ಶಾಲಾ ಕಾಲೇಜುಗಳು ಬಂದ್ ಆಗಲಿದೆ.
ಈಗ ಪರೀಕ್ಷೆ ನಡೆದು ಒಂದು ವರ್ಷವಾಗಿದ್ದರೂ ಫಲಿತಾಂಶ ನೀಡಲು ತಯಾರಿಲ್ಲ. ಇದನ್ನು ಪ್ರಶ್ನಿಸಿದರೆ ಒಬ್ಬರೂ ಮತ್ತೊಬ್ಬರ ಮೇಲೆ ಆರೋಪ ಮಾಡುತ್ತಿದ್ದಾರೆ. ನೀವು ಯಾವುದೇ ಕಾಲೇಜು, ವಿವಿಗೆ ಹೋಗಿ ಎನ್‌ಇಪಿ ಅಂದರೆ ಏನು ಎಂದು ಹೋಗಿ ಕೇಳಿ. ಅವರು ನಮಗೆ ಗೊತ್ತಿಲ್ಲ. ಸರ್ಕಾರ ಜಾರಿಗೆ ತಂದಿದೆ ಸರ್ಕಾರ ನೌಕರರು ನಾವು ಇದರ ಬಗ್ಗೆ ಧ್ವನಿ ಎತ್ತುವಂತಿಲ್ಲ ಎಂದು ಪ್ರಾಂಶುಪಾಲರು ಹೇಳುತ್ತಾರೆ ಎಂದು ಎನ್‌ಎಸ್ ಯೂಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹೇಳಿದ್ದರು.
ಸುಮಾರು 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿಲ್ಲ. ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಶಿಕ್ಷಣ ನಿಲ್ಲಿಸಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕಾಲೇಜಿನಲ್ಲಿ ನಿನ್ನ ವಿದ್ಯಾರ್ಥಿ ವೇತನ ಹಣ ಬಂದಿಲ್ಲ, ನೀನೇ ಶುಲ್ಕ ಪಾವತಿ ಮಾಡು ಎಂದು ಒತ್ತಡ ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ನಿಲ್ಲಿಸಬೇಕಾಗುತ್ತದೆ. ಈ ಸಮಯದಲ್ಲಿ 10ನೇ ಹಾಗೂ ಪಿಯುಸಿ ಅಂಕಪಟ್ಟಿಯನ್ನು ನೀಡದೇ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಶುಲ್ಕ ನೀಡಿದರೆ ಹಿಂದಿರುಗಿಸುವುದಾಗಿ ಹೇಳುತ್ತಾರೆ ಎಂದರು.ಇನ್ನು ರಾಜ್ಯದ ಶೇ.90ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಹಿಂದಿನ ಸರ್ಕಾರಗಳು ಉಚಿತ ಬಸ್ ಪಾಸ್ ನೀಡಿದ್ದವು. ಆದರೆ ಈಗ ಪರಿಶಿಷ್ಟ ಸಮುದಾಯದವರಿಗೆ ಉಚಿತ ಪಾಸ್ ನೀಡಿದ್ದು, ಇದರ ಬಗ್ಗೆ ನಮಗೆ ಆಕ್ಷೇಪವಿಲ್ಲ. ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು. ಬಸ್ ಕೊರತೆಯಿಂದ ಕಾಲೇಜು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದರು.
ಸರ್ಕಾರ ತರಾತುರಿಯಲ್ಲಿ ಯಾವುದೇ ಮುಂದಾಲೋಚನೆ ಮಾಡದೇ ಎನ್ ಇ ಪಿ ಜಾರಿಗೆ ತಂದಿದೆ. ಇದರಿಂದ ಬಹಳಷ್ಟು ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಎನ್ ಇ ಪಿ ಜಾರಿ ವಿರೋಧಿಸಿ ಡಿ.17 ರಂದು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯ ಬಂದ್ ಗೆ ಕರೆ ನೀಡಲಾಗಿದೆ ಎಂದು ಕೀರ್ತಿ ಗಣೇಶ್ ಹೇಳಿದ್ದಾರೆ.ಇದಲ್ಲದೇ ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ. ಶುಲ್ಕ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದೇವೆ, ಸರ್ಕಾರ ನಮ್ಮ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.