ಛಲ ಬಿಡದ ಸಿದ್ಧಾರ್ಥ - ಅಂಗವೈಕಲ್ಯ ಮೆಟ್ಟಿ ನಿಂತು ಐಎಸ್ ಎಫ್ ಕ್ರೀಡಾಕೂಟಕ್ಕೆ ಆಯ್ಕೆ

ಸಣ್ಣದೊಂದು ಅಂಗವೈಕಲ್ಯ ಇದ್ದರೆ ಸಾಕು ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂಬುವವರ ಮಧ್ಯೆ ಇಲ್ಲೊಬ್ಬ ಬಾಲಕ ಸಾಧಿಸಿ ತೋರಿಸಿದ್ದಾನೆ. 26 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆತ ಛಲ ಬಿಡದೇ ಸಾಧನೆ ಮಾಡಿದ್ದಾನೆ. 6500ಕ್ಕೂ ಹೆಚ್ಚು ಹೊಲಿಗೆಗಳು ದೇಹದಲ್ಲಿದ್ದರೂ ಆತನ ಆತ್ಮಸ್ಥೈರ್ಯ ಮಾತ್ರ ಕುಗ್ಗಿಲ್ಲ. ಯಾವುದೇ ಕಷ್ಟ ಬಂದರೂ ಬಿಡದೇ ಮುನ್ನುಗಿ ಮುಗಿಲೆತ್ತರದ ಕೀರ್ತಿಗೆ ಪಾತ್ರವಾಗ್ತಿದ್ದಾನೆ .
ಹೀಗೆ ಹಾರ್ಡ್ ವರ್ಕೌಟ್ ಮಾಡುತ್ತಿರುವ ಈ ಬಾಲಕ ವಾಣಿಜ್ಯನಗರಿ ಹುಬ್ಬಳ್ಳಿಯ ನಿವಾಸಿ ಮಂಜುನಾಥ ಬಳ್ಳಾರಿ ಎಂಬುವವರ ಮಗ. ಇತನ ಹೆಸರು ಸಿದ್ಧಾರ್ಥ ಬಳ್ಳಾರಿ. ಸಾಧನೆ ಮಾಡಬೇಕು ಅಂದರೆ ಅದಕ್ಕೆ ಸಾಧಿಸುವ ಛಲ ಇದ್ದರೇ ಸಾಕು. ಎಂತಹುದೇ ಸಮಸ್ಯೆ ಎದುರಾದರೂ ಸಾಧನೆ ಮಾಡಬಹುದು ಎಂಬುವುದನ್ನು ತೋರಿಸಿಕೊಟ್ಟ ಸಾಧಕ ಈ ಬಾಲಕ. ಹೌದು.. 26 ಬಾರಿಗೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಾಲಕನ ದೇಹದಲ್ಲಿ ಸುಮಾರು 6,500ಕ್ಕೂ ಅಧಿಕ ಹೊಲಿಗೆಗಳಿದ್ದರೂ ಛಲ ಬಿಡದೇ ಅಂತರಾಷ್ಟ್ರೀಯ ಐಎಸ್ಎಫ್ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದು, ದೇಶವನ್ನು ಪ್ರತಿನಿಧಿಸುತ್ತಿದ್ದಾನೆ.
ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ಯಾರಾ ಕ್ರೀಡಾಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದಿರುವ ಹುಬ್ಬಳ್ಳಿಯ ಸಿದ್ದಾರ್ಥ್ ಬಳ್ಳಾರಿ ಈಗ 19ನೇ ಅಂತರರಾಷ್ಟ್ರೀಯ ಸ್ಪೋರ್ಟ್ ಫೆಡರೇಷನ್ (ಐಎಸ್‌ಎಫ್) ಆಯೋಜಿಸಿರುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಕ್ರೀಡಾಕೂಟ ಮೇ 14ರಿಂದ ಫ್ರಾನ್ಸ್ ನಲ್ಲಿ ಆಯೋಜನೆಯಾಗಿದೆ. 18 ವರ್ಷದ ಒಳಗಿನ ಕ್ರೀಡಾಪಟುಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲು ನಗರದ ಶಾಂತಿನಿಕೇತನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಸಿದ್ದಾರ್ಥ. ಎರಡೂವರೆ ವರ್ಷಗಳ ಹಿಂದೆ ನಡೆದ ವಿದ್ಯುತ್ ಅವಘಡದಲ್ಲಿ ಸಿದ್ದಾರ್ಥ್‌ಗೆ 11 ಸಾವಿರ ಕೆ.ವಿ. ವೋಲ್ವೇಜ್‌ನ ವಿದ್ಯುತ್ ತಂತಿ ತಗುಲಿಹೊಟ್ಟೆಯ ಕೆಳಭಾಗವೆಲ್ಲ ಸುಟ್ಟು ಹೋಗಿತ್ತು, ತೊಡೆಯ ಭಾಗದ ಮಾಂಸ ಛಿದ್ರವಾಗಿತ್ತು. ಈಗಲೂ ಎಡಗೈ ಸ್ವಾಧೀನವಿಲ್ಲ. ಇದನ್ನೆಲ್ಲ ಸರಿಪಡಿಸಲು 26 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ದೇಹದಲ್ಲಿ 6,500ಕ್ಕೂ ಹೆಚ್ಚು ಹೊಲಿಗೆಗಳಿವೆ. ಹೀಗಿದ್ದರೂ ಛಲ ಬಿಡದ ಸಿದ್ಧಾರ್ಥ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಜೊತೆಗೆ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಲು ಹೊರಟಿದ್ದಾರೆ.
ಇನ್ನೂ ಹಾಕಿ ಆಟಗಾರ ಆಗಿದ್ದ ಸಿದ್ಧಾರ್ಥ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಕಟ್ಟಿಕೊಂಡಿದ್ದ ಆದರೆ ವಿಧಿ ಸಿದ್ಧಾರ್ಥ ಜೀವನದಲ್ಲಿ ಆಟ ಆಡಿತ್ತು. ಆದರೆ ಇದನ್ನೇ ಸವಾಲು ಎಂದು ಸ್ವೀಕರಿಸಿ ದಿನವೂ ಹಾರ್ಡ್ ವರ್ಕ್ ಮೂಲಕ ತನ್ನ ಶಸ್ತ್ರಚಿಕಿತ್ಸೆಗಿಂತ ಹೆಚ್ಚು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾನೆ. ಈ ಎಲ್ಲಾ ಸವಾಲುಗಳ ನಡುವೆ ಅರಳಿ ನಿಂತಿರುವ ಸಿದ್ದಾರ್ಥ್ ಬಳ್ಳಾರಿ ಐಎಸ್‌ಎಫ್ ಕ್ರೀಡಾಕೂಟದಲ್ಲಿ 100 ಮೀಟರ್, 400 ಮೀ. ಮತ್ತು ಲಾಂಗ್‌ಜಂಪ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ತಂಡದ ಆಯ್ಕೆಗಾಗಿ ಭುವನೇಶ್ವರದಲ್ಲಿ ಈಚೆಗೆ ಭಾರತ ಸ್ಕೂಲ್ ಗೇಮ್ಸ್ ಫೆಡರೇಷನ್ (ಎಸ್‌ಜಿಎಫ್‌ಐ) ಆಯೋಜಿಸಿದ್ದ ಅಯ್ಕೆ ಟ್ರಯಲ್ಸ್‌ನಲ್ಲಿ ಅರ್ಹತೆ ಪಡೆದಿದ್ದಾರೆ. ಒಟ್ಟಿನಲ್ಲಿ ಇಂತಹದೊಂದು ಪ್ರತಿಭೆಯು ಹುಬ್ಬಳ್ಳಿಯಲ್ಲಿ ಅರಳುತ್ತಿರುವುದು ವಾಣಿಜ್ಯನಗರಿ ಹೆಮ್ಮೆ. ಇಂತಹ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಹಾಗೂ ಸರ್ಕಾರ ಧನ ಸಹಾಯ ಮಾಡುವ ಮೂಲಕ ಮತ್ತಷ್ಟು ಸಾಧನೆಗೆ ಬೆಂಬಲ ನೀಡಬೇಕಿದೆ. ಅಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪ್ರತಿಭೆಗೆ ಬೇಕಿದೆ ಧನಸಹಾಯದ ಪ್ರೋತ್ಸಾಹ.