ಚಿತ್ರದುರ್ಗ: ಕುಸಿದ ಗೋಡೆ; ದಂಪತಿ ಸೇರಿ ಮೂವರ ಸಾವು

ಚಿತ್ರದುರ್ಗ: ಕುಸಿದ ಗೋಡೆ; ದಂಪತಿ ಸೇರಿ ಮೂವರ ಸಾವು

ಚಿತ್ರದುರ್ಗ: ಜಿಲ್ಲೆಯ ನಾಯಕನಹಟ್ಟಿ ಹಾಗೂ ಧರ್ಮಪುರ ಹೊಬಳಿಯಲ್ಲಿ ಮಳೆಯಿಂದ ಮನೆ ಕುಸಿದ ಪ್ರತ್ಯೇಕ ಘಟನೆಯಲ್ಲಿ ದಂಪತಿ ಸಹಿತ ಮೂವರು ಮೃತಪಟ್ಟಿದ್ದಾರೆ. ಒಬ್ಬರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಯಕನಹಟ್ಟಿಯ ಟಿ.ಕಂಪ್ಲೇಶಪ್ಪ (46), ತಿಪ್ಪಮ್ಮ (38) ಹಾಗೂ ಧರ್ಮಪುರ ಹೋಬಳಿಯ ಬ್ಯಾಡರಹಳ್ಳಿ ನಿವಾಸಿ ತ್ರಿವೇಣಿ (25) ಮೃತಪಟ್ಟವರು.

ನಿರಂತರವಾಗಿ ಸುರಿದ ಮಳೆಗೆ ನಾಯಕನಹಟ್ಟಿಯ ಅಂಬೇಡ್ಕರ್‌ ಕಾಲೊನಿಯ ಕಂಪ್ಲೇಶಪ್ಪ ಅವರ ಮನೆಯ ಗೋಡೆ ಕುಸಿದಿದೆ. ಮನೆಯಲ್ಲಿ ಮಲಗಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ರ ಅರುಣ್ ಕುಮಾರ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಡೆ ಕುಸಿದ ಸದ್ದು ಕೇಳಿ ಸ್ಥಳೀಯರು ತಕ್ಷಣ ನೆರವಿಗೆ ತೆರಳಿದರು. ಮಣ್ಣು ತೆಗೆದು ಪ್ರಾಣ ಉಳಿಸಲು ಪ್ರಯತ್ನಿಸಿದರು.

ಧರ್ಮಪುರ ಸಮೀಪದ ಬ್ಯಾಡರಹಳ್ಳಿಯಲ್ಲಿ ನಸುಕಿನ 2 ಗಂಟೆಯ ಸಂದರ್ಭದಲ್ಲಿ ಕೃಷ್ಣಮೂರ್ತಿ ಎಂಬುವರ ಮನೆಯ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿ ಮಲಗಿದ್ದ ಅವರ ಪತ್ನಿ ತ್ರಿವೇಣಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಣ್ಣಿನಲ್ಲಿ ಸಿಲುಕಿದ್ದ ತ್ರಿವೇಣಿ ಅವರನ್ನು ಗ್ರಾಮಸ್ಥರ ಸಹಾಯದಿಂದ ಹೊರಗೆ ತೆಗೆಯಲಾಯಿತು.

ಶಾಲೆಗೆ ರಜೆ ಘೋಷಣೆ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಶುಕ್ರವಾರ ಮತ್ತು ಶನಿವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಯ 1ರಿಂದ 10ನೇ ತರಗತಿಯ ಮಕ್ಕಳಿಗೆ ರಜೆ ನೀಡಲಾಗಿದೆ.

ಗುರುವಾರ ರಾತ್ರಿ 9ಕ್ಕೆ ಆರಂಭವಾದ ಮಳೆ ಸೋನೆಯಂತೆ ಶುಕ್ರವಾರ ಬೆಳಿಗ್ಗೆಯವರೆಗೆ ಸುರಿದಿದೆ. ಹೊಸದುರ್ಗ, ಹಿರಿಯೂರು ಹಾಗೂ ಹೊಳಲ್ಕೆರೆ ಭಾಗದಲ್ಲಿ ಕೊಂಚ ಬಿರುಸಿನಿಂದ ಮಳೆಯಾಗಿದೆ. ಶಿಥಿಲಗೊಂಡಿರುವ ಮನೆಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಅಗತ್ಯ ಇರುವ ಕಡೆ ಕಾಳಜಿ ಕೇಂದ್ರ ತೆರೆಯುವಂತೆಯೂ ಆದೇಶಿಸಿದ್ದಾರೆ.