ಚಾರ್ಮಾಡಿ ಘಾಟಿಯಲ್ಲಿ ಉಕ್ಕಿ ಹರಿಯುತ್ತಿರುವ ಜಲಪಾತ- ಜಾರುವ ಬಂಡೆ ಮೇಲೆ ಪ್ರವಾಸಿಗರ ಹುಚ್ಚಾಟ

ಚಿಕ್ಕಮಗಳೂರು: ಚಾರ್ಮಾಡಿ ಘಾಟಿಯಲ್ಲಿ ಉಕ್ಕಿ ಹರಿಯುತ್ತಿರುವ ಜಲಪಾತಗಳ ಬಳಿ ಜಾರುವ ಬಂಡೆ ಮೇಲೆ ಪ್ರವಾಸಿಗರ ಹುಚ್ಚಾಟ ಮಾಡುತ್ತಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಜಲಪಾತಗಳ ಬಳಿ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ಹತ್ತಿ ಮೋಜು ಮಸ್ತಿ ಮಾಡುತ್ತಿರುವುದ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.
ಕಳೆದೊಂದು ವಾರದಿಂದ ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಚಾರ್ಮಾಡಿಯ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಭಾರೀ ಮಳೆಯಿಂದ ಚಾರ್ಮಾಡಿ ರಸ್ತೆಯೂದ್ಧಕ್ಕೂ ನೂರಾರು ಜಲಪಾತಗಳು ಸೃಷ್ಠಿಯಾಗಿವೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಹಾಗೂ ದಾರಿ ಹೊಕ್ಕರು ಪ್ರಕೃತಿಯ ಸೌಂದರ್ಯವನ್ನ ದೂರದಲ್ಲಿ ನಿಂತು ಸವಿಯದೆ ಬಂಡೆಗಳ ಮೇಲೆ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ.
ನಿರಂತರ ಮಳೆಯಿಂದ ಇಲ್ಲಿನ ಬಂಡೆಗಳು ನಿರಂತರವಾಗಿ ನೀರು ಹರಿದು, ಪಾಚಿ ಬೆಳೆದು ತೀವ್ರವಾಗಿ ಜಾರುತ್ತಿದ್ದು, ಸ್ವಲ್ಪ ಹೆಚ್ಚು ಕಮ್ಮಿಯಾದರೂ ಜೀವ ಹೋಗುವಂತಹಾ ಸನ್ನಿವೇಶ ಎದುರಾಗಬಹುದು. ಈಗಾಗಲೇ ಇದೇ ಜಾಗದಲ್ಲಿ ಬಂಡೆ ಮೇಲೆ ಹತ್ತಿ ಬಿದ್ದು ಕೆಲವರು ಸಾವನ್ನಪ್ಪಿದ್ದಾರೆ. ಕೈ-ಕಾಲು ಮುರಿದುಕೊಂಡವರು ಇದ್ದಾರೆ. ಆದರೂ ಜನಸಾಮಾನ್ಯರು, ಪ್ರವಾಸಿಗರ ಬುದ್ಧಿ ಕಲಿತಿಲ್ಲ. ಜಿಲ್ಲಾಡಳಿತ ಪ್ರವಾಸಿಗರು ಬಂಡೆ ಹತ್ತಿ ಮೋಜು-ಮಸ್ತಿ ಮಾಡೋದಕ್ಕೆ ಸಂಪೂರ್ಣ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರವಾಸಿಗರು ಬಂಡೆಗಳ ಮೇಲೆ ಹತ್ತಬಾರದು ಎಂದು ಸರ್ಕಾರದ ಆದೇಶವಿದೆ. ಆದರೆ, ಸರ್ಕಾರದ ಆದೇಶವನ್ನ ಇಲ್ಲಿ ಪಾಲಿಸೋರು ಯಾರು ಇಲ್ಲ. ಸ್ಥಳೀಯರು ಅಪಾಯದ ಸ್ಥಳ ಹಾಗೂ ಪ್ರವಾಸಿಗರು ಬಂಡೆ ಹತ್ತುವ ಜಾಗದಲ್ಲಿ ನಾಮಫಲಕ ಹಾಕಬೇಕಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರೋದು ಪ್ರವಾಸಿಗರ ಹುಚ್ಚಾಟಕ್ಕೆ ಕಾರಣವಾಗಿದೆ. ಪೊಲೀಸರು ಗಸ್ತು ತಿರುಗದಿರೋದು ಕೂಡ ಪ್ರವಾಸಿಗರ ಬೇಜಾವಾಬ್ದಾರಿಗೆ ಕಾರಣವಾಗಿದೆ. ಸ್ಥಳೀಯರು ಹಲವಾರು ಬಾರಿ ಅರಣ್ಯ ಹಾಗೂ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದೊಂದು ದಿನ ದೊಡ್ಡ ಅನಾಹುತವಾಗುವ ಮೊದಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.