ಚನ್ನಪಟ್ಟಣ, ಕೆಆರ್ ಪೇಟೆಗೆ ಘೋಷಣೆಯಾಗದ 'ಕೈ' ಟಿಕೆಟ್: ದಟ್ಟಗೊಂಡ 'ಆಪರೇಷನ್ ಹಸ್ತ'ದ ಶಂಕೆ

ಬೆಂಗಳೂರು, ಮಾರ್ಚ್ 25: ಕರ್ನಾಟಕ ಚುನಾವಣೆಯು ( Karnataka Assembly Elections 2023 ) ಮೇ ತಿಂಗಳಲ್ಲಿ ನಡೆಯಲಿದೆ. ರಾಜ್ಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ, ಕಾಂಗ್ರೆಸ್‌ನ ( Congress ) ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ( Siddaramaiah ) ವರಣಾ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತವಾಗಿದೆ.
ಇನ್ನುಳಿದ ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿನ ವಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇಂದು ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ಹಾಗೂ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಅಭ್ಯರ್ಥಿಗಳ ಹೆಸರುಗಳು ಕಾಣಿಸಿಕೊಂಡಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಜೆಡಿಎಸ್‌ನಿಂದ ಚನ್ನಪಟ್ಟಣದಲ್ಲಿ ಸ್ಪರ್ಧಿಸಲಿದ್ದಾರೆ. ಅವರ ವಿರುದ್ಧ ಪ್ರಬಲ ನಾಯಕರೊಬ್ಬರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯತ್ನ ನಡೆಸಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಸಚಿವ ಹಾಗೂ ಬಿಜೆಪಿ ಎಂಎಲ್‌ಸಿ ಸಿಪಿ ಯೋಗೇಶ್ವರ್ ಅವರನ್ನು ಸೆಳೆಯಲು ಕಾಂಗ್ರೆಸ್ ಯತ್ನ ನಡೆಸಿದೆ ಎಂದು ಹೇಳಲಾಗುತ್ತಿದೆ. ಕುಮಾರಸ್ವಾಮಿ ಅವರ ಬದ್ದ ವೈರಿ ಎಂದೇ ಪರಿಗಣಿಸಲ್ಪಟ್ಟಿರುವ ಯೋಗೇಶ್ವರ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಈ ಹಿಂದೆ ಚನ್ನಪಟ್ಟಣದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಒಂದು ವೇಳೆ, ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಲ್ಲಿ ಕುಮಾರಸ್ವಾಮಿ ಅವರಿಗೆ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಲಿದ್ದಾರೆ ಎಂಬ ಅಭಿಪ್ರಾಯಗಳನ್ನು ರಾಜಕೀಯ ತಜ್ಞರು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಸಿಪಿ ಯೋಗೇಶ್ವರ್ ಪ್ರಮುಖ ಪಾತ್ರವಹಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಶತಾಯಗತಾಯ ಹೋರಾಟ ಮಾಡಿದ್ದಾರೆ. ಅವರಿಗೆ ಬಿಜೆಪಿಯಿಂದ ಟಿಕೆಟ್ ದೊರೆತರೂ ಸಹ ಚನ್ನಪಟ್ಟಣದಲ್ಲಿ ಬಿಜೆಪಿ ಮತಗಳು ಅಷ್ಟೇನೂ ಇಲ್ಲ. ಆದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ, ಅದರ ಸಾಂಪ್ರದಾಯಿಕ ಮತಗಳು ಯೋಗೇಶ್ವರ್‌ಗೆ ಬರಲಿದೆ. ವೈಯುಕ್ತಿಕ ವರ್ಚಸ್ಸು ಹಾಗೂ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿಂದ ಯೋಗೇಶ್ವರ್‌ಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
ಕೆಆರ್ ಪೇಟೆ ಶಾಸಕ ಹಾಗೂ ಸಚಿವ ನಾರಾಯಣಗೌಡ ಅವರು ಕಾಂಗ್ರೆಸ್‌ಗೆ ಸೇರ್ಪಡೆ ಆಗಲಿದ್ದಾರೆ ಎಂಬ ಮಾತುಗಳು ಹಲವು ತಿಂಗಳಿಂದ ಜಾರಿಯಲ್ಲಿವೆ. ಈ ವಿಚಾರವಾಗಿ ಸಚಿವ ನಾರಾಯಣಗೌಡರ ನಡೆಯೂ ನಿಗೂಢವಾಗಿದೆ. ಚುನಾವಣೆ ನೀತಿ ಸಂಹಿತೆ ಬಂದ ನಂತರ ನಾರಾಯಣಗೌಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಶಂಕೆಗಳು ವ್ಯಕ್ತವಾಗಿವೆ.
2018ರಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಅವರು 2019ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾದರು. ಆ ನಂತರ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಅವರು ಕೆಆರ್ ಪೇಟೆಯಲ್ಲಿ ವೈಯಕ್ತಿಕ ವರ್ಚಸ್ಸನ್ನು ಹೊಂದಿದ್ದಾರೆ. ಕಾಂಗ್ರೆಸ್‌ಗೆ ಸೇರ್ಪಡೆಗೊಂಡರೆ, ಸಾಂಪ್ರದಾಯಿಕ ಮತಗಳೂ ಅವರಿಗೆ ಬರಲಿವೆ. ಈ ಹಿನ್ನೆಲೆಯಲ್ಲಿ ನಾರಾಯಣಗೌಡರು ಕಾಂಗ್ರೆಸ್ ಸೇರುವುದು ಒಳಿತೆಂದು ಬಯಸಿದ್ದರೆ ಅಚ್ಚರಿ ಪಡಬೇಕಿಲ್ಲ.
ಇನ್ನುಳಿದಂತೆ ಆಪರೇಷನ್ ಕಮಲ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಬೆಂಗಳೂರಿನ ಕೆಆರ್ ಪುರಂ ಶಾಸಕ ಬೈರತಿ ಬಸವರಾಜ್, ಕಲಬುರಗಿ ಜಿಲ್ಲೆಯ ಅಫಜಲ್ಪುರ ಕ್ಷೇತ್ರದ ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ, ಕಲಬುರಗಿ ಬಿಜೆಪಿ ಸಂಸದ ಉಮೇಶ್ ಜಾದವ್ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಇನ್ನಷ್ಟು ಕುತೂಹಲಕರ ಬೆಳವಣಿಗೆಗಳು ನಡೆಯುವುದು ಮಾತ್ರ ನಿಶ್ಚಿತ.