ಗೋವಾ ಮುಕ್ತಿಯ 60 ವರ್ಷ: ನಾಳೆ ಮೋದಿ ಭೇಟಿ

ಗೋವಾ ಮುಕ್ತಿಯ 60 ವರ್ಷ: ನಾಳೆ ಮೋದಿ ಭೇಟಿ

ಪಣಜಿ: ಗೋವಾ ಮುಕ್ತಿಯ 60 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಗೋವಾಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಗೋವಾ ಮುಕ್ತಿ ದಿನದ 60 ನೇ ವರ್ಷ ಮಹೋತ್ಸವವನ್ನು ಕಳೆದ ವರ್ಷ ರಾಷ್ಟ್ರಪತಿ ರಾಮನಾಥ ಕೋವಿಂದ್ ಉಧ್ಘಾಟನೆ ನೆರವೇರಿಸಿದ್ದರು, ಇದೀಗ ಡಿಸೆಂಬರ್ 19 ರಂದು ನಡೆಯಲಿರುವ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿರುವರು. ರಾಜ್ಯ ಸರ್ಕಾರದ ವತಿಯಿಂದ ಗೋವಾ ಮುಕ್ತಿ ದಿನದ ಕಾರ್ಯಕ್ರಮ ಪಣಜಿಯ ಪೆರೇಡ್ ಗ್ರೌಂಡ್‍ನಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಮಧ್ಯಾನ್ಹ 1.30 ಕ್ಕೆ ಗೋವಾಕ್ಕೆ ಆಗಮಿಸಲಿದ್ದಾರೆ. ನಂತರ ಪಣಜಿಯ ಆಜಾದ್ ಮೈದಾನದಲ್ಲಿ ಹುತಾತ್ಮರ ಸ್ಮಾರಕಕ್ಕೆ ಗೌರವ ವಂದನೆ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಪೋಲಿಸ್ ಮತ್ತು ಗೃಹರಕ್ಷಕ ದಳದ ವತಿಯಿಂದ ಪ್ರಧಾನಿಗಳು ಗೌರವ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಗೋವಾ ಮುಕ್ತಿದಿನದ ವಿವಿಧ ಕಾರ್ಯಕ್ರಮಗಳು ಪಣಜಿಯಲ್ಲಿ ಭಾನುವಾರ ಆಯೋಜಿಸಲಾಗಿರುವ ಹಿನ್ನೆಲೆಯಲ್ಲಿ ಪಣಜಿಯ ದಯಾನಂದ ಬಾಂದೋಡ್ಕರ್ ಮಾರ್ಗ ಮತ್ತು ಬಾಂದೋಡ್ಕರ್ ರವರ ಪುತ್ಥಳಿ ಬಳಿಯಿಂದ ಬಾಂಬೋಲಿಂ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಭಾನುವಾರ ಮಧ್ಯಾನ್ಹ 1.30 ರ ನಂತರ ಪಣಜಿಗೆ ಆಗಮಿಸುವ ಎಲ್ಲ ವಾಹನಗಳನ್ನು ಗೋವಾ ವೈದ್ಯಕೀಯ ಕಾಲೇಜು ಬಾಂಬೋಲಿಂ ಬಳಿಯಿಂದ ಗೋವಾ ವಿಶ್ವವಿದ್ಯಾಲಯ ಮಾರ್ಗಕ್ಕೆ ಬದಲಾವಣೆ ಮಾಡಲಾಗಿದೆ.