ಗಿರಿಯಜ್ಜನ ಕುರುಹು ಹುಡುಕತ್ತ ಕರ್ನಾಟಕಕ್ಕೆ ಬಂದ ಕಿಟೆಲ್ ಕುಟುಂಬಸ್ಥರು.

ಧಾರವಾಡ : ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ ಎನ್ನುವಂತೆ ಎಲ್ಲಿಯ ಜರ್ಮನಿ ಎಲ್ಲಿಯ ಧಾರವಾಡ, ಹೌದು ಆದರೂ ಎರಡಕ್ಕೂ ಕಿಟೆಲ್ ರಿಂದಾಗಿ ಅವಿನಾಭಾವ ಸಂಬಂಧವಿದೆ.ಈಗ ತಮ್ಮ ಗಿರಿಯಜ್ಜನ ನೆನಪುಗಳನ್ನು ಹೊತ್ತ ಕಿಟೆಲ್ ಕುಟುಂಬ ಸದಸ್ಯರು ಧಾರವಾಡಕ್ಕೆ ಆಗಮಿಸಿದ್ದಾರೆ.ನಗರಕ್ಕೆ ಆಗಮಿಸಿದ ಕಿಟೆಲ್ ಕುಟುಂಬ ಸದಸ್ಯರನ್ನು ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳು ಸನ್ಮಾನಿಸಿದ್ದಾರೆ.19 ನೇ ಶತಮಾನದಲ್ಲಿ ಮತ ಪ್ರಚಾರಕ್ಕೆಂದು ಕರ್ನಾಟಕಕ್ಕೇ ಬಂದಿದ್ದ ಕಿಟೆಲ್ ಅವರು ಮುಂದೆ ಕನ್ನಡ ನಿಘಂಟು ರಚನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಅವರು ಧಾರವಾಡದಲ್ಲಿಯೇ ಇದ್ದು ಕನ್ನಡ ಸಾಹಿತ್ಯ ಬೆಳವಣಿಗೆಗೆ ಗಮನಾರ್ಹ ಕೊಡುಗೆಯನ್ನು ನೀಡಿದರು.
ಈಗ ತಮ್ಮ ಗಿರಿಯಜ್ಜನ ನೆನಪುಗಳನ್ನು ಹೊತ್ತ ಮರಿಮೊಮ್ಮಗಳು ಅಲ್ಮುತ್ ಮಯರ್ ಹಾಗೂ ಅವರ ಮಗ ಫ್ಯಾಟ್ರಿಕ್ ಮಯರ್ ಸ್ನೇಹಿತ ಜಾನ್ ಫೆಡಿರಿಕ್ ಜೊತೆಗೆ ಧಾರವಾಡಕ್ಕೆ ಭೇಟಿ ನೀಡಿದ್ದಾರೆ.ಇದೆ ವೇಳೆ ಕಿಟೆಲ್ ಕಾಲೇಜ್ ಮತ್ತು ಕಿಟೆಲ್ ತಂಗಿದ್ದ ಮನೆ ವೀಕ್ಷಿಸಿದ್ದಾರೆ.
ಈ ವೇಳೆ ಗಿರಿಮೊಮ್ಮಗ ಫ್ಯಾಟ್ರಿಕ್ ಜರ್ಮನ್‌ನಿಂದ ಆಗಾಗ ಧಾರವಾಡಕ್ಕೆ ಬರೋದಾಗಿ ವಾಗ್ದಾನ ಮಾಡಿರುವುದಲ್ಲದೆ ಕನ್ನಡ ಕಲಿಯುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಕಿಟೆಲ್‌ರ ಕೆಲವೊಂದು ಮಹತ್ವದ ವಸ್ತುಗಳನ್ನು ಮ್ಯೂಸಿಯಂಗಾಗಿ ನೀಡಲು ತೀರ್ಮಾನಿಸಿದ್ದಾರೆ.