ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಪ್ರಕರಣ ದಾಖಲಿಸಿದ ಸಪ್ನಾ ಗಿಲ್

ಕ್ರಿಕೆಟಿಗ ಪೃಥ್ವಿ ಶಾ ವಿರುದ್ಧ ಪ್ರಕರಣ ದಾಖಲಿಸಿದ ಸಪ್ನಾ ಗಿಲ್

ಭಾರತದ ಯುವ ಆಟಗಾರ ಪೃಥ್ವಿ ಶಾ ಸೆಲ್ಫಿ ಗಲಾಟೆ ಪ್ರಕರಣ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಹಲ್ಲೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಹಿಳೆ ಸಪ್ನಾ ಗಿಲ್ ಜಾಮೀನಿನ ಮೇಲೆ ಹೊರಬಂದಿದ್ದು ಪೃಥ್ವಿ ಶಾ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಈ ದೂರಿನಲ್ಲಿ ಆರೋಪಿಸಲಾಗಿದೆ.

ಪೊಲೀಸ್ ಕಸ್ಟಡಿಯಿಂದ ಬಿಡುಗಡೆಯಾದ ಮರುದಿನವೇ ಸಪ್ನಾಗಿಲ್ ತಮ್ಮ ವಕೀಲರ ಮೂಲಕ ಈ ಪ್ರಕರಣ ದಾಖಲಿಸಿದ್ದಾರೆ.

ಸಪ್ನಾ ಗಿಲ್ ಪರ ವಕೀಲ ಕಾಶಿಫ್ ಅಲಿ ಖಾನ್ ದೂರು ದಾಖಲಿಸಿದ್ದು ಸಾರ್ವಜನಿಕ ಅಸಭ್ಯತೆ ಹಾಗೂ ದೈಹಿಕ ಹಾನಿಯುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹರಿತವಾದ ಸಲಕರಣೆಯಿಂದ ಸಪ್ನಾ ಗಿಲ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕೂಡ ಆರೋಪಿಸಲಾಗಿದೆ. ಪೃಥ್ವಿ ಶಾ ಮತ್ತು ಇತರರ ವಿರುದ್ಧ ಸೆಕ್ಷನ್ 34, 120 ಬಿ, 144, 146, 148, 149, 323, 324, 351, 354 ಮತ್ತು 509ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕಾಶಿಫ್ ಅಲಿ ಖಾನ್ ಹೇಳಿದ್ದಾರೆ.

ಈ ಹಿಂದೆ ಪೃಥ್ವಿ ಶಾ ಸ್ನೇಹಿತ ಸಪ್ನಾ ಗಿಲ್ ವಿರುದ್ಧ ದೂರು ದಾಖಲಸಿದ್ದರು. ಐಪಿಸಿ ಸೆಕ್ಷನ್ 34, 120-ಎ, 144, 146, 148, 149, 323, 324, 351 ಮತ್ತು 509 ಅಡಿಯಲ್ಲಿ ಪ್ರಕರಣ ದಾಖಲಲಾಗಿತ್ತು ಈ ಹಿನ್ನೆಲೆಯಲ್ಲಿ ಸಪ್ನಾ ಗಿಲ್ ಸೇರಿದಂತೆ ಒಟ್ಟು 8 ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಇನ್ನು ಪ್ರಕಣ ದಾಖಲಿಸುವುದಕ್ಕೂ ಮುನ್ನ ಅಂಧೇರಿಯ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ವಕೀಲ ಕಾಶಿಫ್ ಅಲಿ ಖಾನ್ ಮೂಲಕ ಪೃಥ್ವಿ ಶಾ ಹಾಗೂ ಗೆಳೆಯ ಆಶಿಶ್ ಯಾದವ್ ಸೇರಿದಂತೆ ಇತರರ ವಿರುದ್ಧ ದೌರ್ಜನ್ಯದ ಆರೋಪವನ್ನು ಮಾಡಿ ದಾಖಲಿಸುವಂತೆ ಮಹಿಳೆ ಸಪ್ನಾ ಗಿಲ್ ಅರ್ಜಿ ಸಲ್ಲಿಸಿದ್ದರು.

ಸಪ್ನಾ ಗಿಲ್ ಸಲ್ಲಿದ ಅರ್ಜಿಯ ಪ್ರಕಾರ ಆಕೆ ಮತ್ತು ಆಕೆಯ ಸ್ನೇಹಿತ ಶೋಭಿತ್ ಠಾಕೂರ್ ಅವರು ಅಪ್‌ಮಾರ್ಕೆಟ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಅಲ್ಲಿ ಪೃಥ್ವಿ ಶಾ ಹಾಗೂ ಸ್ನೇಹಿತರು ಪಾರ್ಟಿ ಮಾಡುತ್ತಿದ್ದು ಆ ಸಂದರ್ಭದಲ್ಲಿ ಅವರು ಮದ್ಯ ಸೇವನೆ ಮಾಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ. ಠಾಕೂರ್ ಅವರು ಕ್ರಿಕೆಟ್ ಅಭಿಮಾನಿಯಾಗಿರುವುದರಿಂದ ಸೆಲ್ಫಿಗಾಗಿ ಪೃಥ್ವಿ ಶಾ ಅವರನ್ನು ಸಂಪರ್ಕಿಸಿದ್ದು ಇದು ಜಗಳಕ್ಕೆ ಕಾರಣವಾಯಿತು ಎಂದು ದೂರಿದ್ದಾರೆ.

"ಶೋಭಿತ್ ಠಾಕೂರ್ ಹದಿಹರೆಯದವನಾಗಿದ್ದ ಆತನಿಗೆ ಕುಡುಕ ಗುಂಪಿನ ಕ್ರೌರ್ಯದ ಬಗ್ಗೆ ಅರಿವು ಇರಲಿಲ್ಲ. ಆತ ಅಸಹಾಯಕನಾಗಿದ್ದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಆಕೆ(ಗಿಲ್) ಮಧ್ಯ ಪ್ರವೇಶಿಸಿದ್ದು ಠಾಕೂರ್‌ಗೆ ಮತ್ತಷ್ಟು ಗಾಯಗಳಾಗದಂತೆ ಶಾ ಮತ್ತು ಇತರರನ್ನು ತಡೆಯಲು ಪ್ರಯತ್ನಿಸಿದಳು" ಎಂದು ಈ ಅರ್ಜಿಯಲ್ಲಿ ವಿವರಿಸಲಾಗಿದೆ. ಅಲ್ಲದೆ ಮದ್ಯದ ನಶೆಯಲ್ಲಿದ್ದ ಫೃಥ್ವಿ ಶಾ ಬಳಿ ಮಹಿಳೆ ಬೇಡಿಕೊಂಡು ಮನವಿ ಮಾಡಿದರು ಎಂದು ಕೂಡ ಉಲ್ಲೇಖಿಸಲಾಗಿದೆ.