ಉದ್ಯಮಿ ಸೈರಸ್ ಮಿಸ್ತ್ರಿ ಸಾವು; ಲೇಡಿ ಡಾಕ್ಟರ್ ವಿರುದ್ಧ ಕೇಸ್..
ನವದೆಹಲಿ: ಉದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೈನಕಲಾಜಿಸ್ಟ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮುಂಬೈನ ಖ್ಯಾತ ಗೈನಕಲಾಜಿಸ್ಟ್ ಡಾ.ಅನಹಿತ ಪಂಡೋಲೆ ಎಂಬಾಕೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಷಾಪೂರ್ಜಿ ಪಲ್ಲೊನ್ಜಿ ಗ್ರೂಪ್ ಕುಟುಂಬದ ಖ್ಯಾತ ಉದ್ಯಮಿ, ಟಾಟಾ ಸನ್ಸ್ ಸಂಸ್ಥೆಯ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಅವರು ಸೆಪ್ಟೆಂಬರ್ನಲ್ಲಿ ಮರ್ಸಿಡೆಸ್ ಕಾರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಅವರ ಸಾವಿನ ಎರಡು ತಿಂಗಳ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಡಾ.ಅನಹಿತ ಪಂಡೋಲೆ ಎಂಬಾಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಪಾಲ್ಘಾರ್ ಬಳಿ ಈ ಅಪಘಾತ ಸಂಭವಿಸಿದ್ದ ಸಂದರ್ಭದಲ್ಲಿ ಡಾ.ಅನಹಿತ ಅವರು ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೇಸು ದಾಖಲಾಗಿದೆ. ಈ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಜತೆಗೆ ಇನ್ನೊಬ್ಬ ಉದ್ಯಮಿ ಜಹಂಗೀರ್ ಪಂಡೋಲೆ ಕೂಡ ಸಾವಿಗೀಡಾಗಿದ್ದರು. ಕಾರಿನಲ್ಲಿ ಅನಹಿತ (55) ಹಾಗೂ ಆಕೆಯ ಪತಿ ದರಿಯಸ್ (60) ಗಂಭೀರವಾಗಿ ಗಾಯಗೊಂಡಿದ್ದರು. ದರಿಯಸ್ ಅವರ ಹೇಳಿಕೆ ಆಧರಿಸಿ ಪೊಲೀಸರು ಅನಹಿತ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.