ಸಂಘ ಮಧ್ಯಸ್ಥಿಕೆ: ಪಂಚಮಸಾಲಿ ಮೀಸಲು ವಿವಾದ ಶೀಘ್ರ ಶಮನ

ಸಂಘ ಮಧ್ಯಸ್ಥಿಕೆ: ಪಂಚಮಸಾಲಿ ಮೀಸಲು ವಿವಾದ ಶೀಘ್ರ ಶಮನ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿಯೇ ಪಂಚಮಸಾಲಿ ಮೀಸಲು ಹೋರಾಟವನ್ನು ತಣ್ಣಗಾಗಿಸುವುದಕ್ಕೆ ಸರ್ಕಾರ ಹೆಣಗುತ್ತಿರುವಾಗಲೇ ಸಂಘ- ಪರಿವಾರದ ಹಿರಿಯರು ಮಧ್ಯ ಪ್ರವೇಶಕ್ಕೆ ಮುಂದಾಗಿದ್ದು, ವಿವಾದವನ್ನು “ತಾರ್ಕಿಕ’ವಾಗಿ ಅಂತ್ಯಗೊಳಿಸಲು ಸಂಧಾನ ಮಾರ್ಗ ಅನುಸರಿಸಲು ನಿರ್ಧರಿಸಲಾಗಿದೆ.

ಮೀಸಲು ವಿವಾದವನ್ನು ತಣ್ಣಗಾ ಗಿಸುವುದಕ್ಕೆ “ಸಂಘರ್ಷ’ಕ್ಕಿಂತ “ಸಂಧಾನ’ವೇ ಸೂಕ್ತ ಎಂಬ ಅಭಿ ಪ್ರಾಯವನ್ನು ಕರ್ನಾಟಕದ ಸಂಘ- ಪರಿವಾರದ ಮುಖಂಡರು ರಾಷ್ಟ್ರೀಯ ವರಿಷ್ಠರಿಗೂ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಕರೆ ಮಾಡಿ ತಾಳ್ಮೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ದೆಹಲಿಗೆ ಬರುವಂತೆ ಯತ್ನಾಳ್‌ಗೆ ವರಿಷ್ಠರಿಂದಲೇ ಕರೆ ಬಂದಿರುವುದರಿಂದ ಈ ಮಾಸಾಂತ್ಯದ ವೇಳೆಗೆ ಪರಿಸ್ಥಿತಿ ತಿಳಿಗೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ.

ಬಿಜೆಪಿಯ ಉನ್ನತ ಮೂಲಗಳಿಂದ “ಉದಯವಾಣಿ’ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಪ್ರತಿಭಟನೆಯ ಕರೆ ನೀಡಿರುವ ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಸಂಘ-ಪರಿವಾರದ ಹಿರಿಯರೊಬ್ಬರು ಸೋಮವಾರ ಭೇಟಿ ಮಾಡಿ ಒಂದೂವರೆ ಗಂಟೆಗಳ ಕಾಲ ಚರ್ಚಿಸಿದ್ದಾರೆ. “ಈಗ ಬೇಡಿಕೆ ಇಟ್ಟಿರುವ ಸ್ವರೂಪ’ದಲ್ಲಿ ಮೀಸಲು ಸೌಲಭ್ಯ ಕೊಡುವುದಕ್ಕೆ ಇರುವ ಅಡ್ಡಿ, ಕಾನೂನಾತ್ಮಕ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಘ-ಪರಿವಾರದ ಹಿರಿಯರ ಜತೆಗೆ ಈ ವಾರಾಂ ತ್ಯದಲ್ಲಿ ಪಂಚಮಸಾಲಿ ಮೀಸಲು ಹೋರಾಟದ ಮುಂಚೂಣಿ ಯಲ್ಲಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಜಯ ಮೃತ್ಯುಂಜಯ ಸ್ವಾಮೀಜಿ ಕಾನೂನು ತಜ್ಞರ ಜತೆಗೆ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಭೆಯ ಬಳಿಕವೇ ಅವರು ಹೊಸದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.

ಈ ವಿಚಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಎಚ್ಚರಿ ಕೆಯ ಹೆಜ್ಜೆ ಇಡುತ್ತಿದ್ದಾರೆ. ಎಲ್ಲಿಯೂ ಸಂಘರ್ಷ ಉಲ್ಬಣ ವಾಗುವಂಥ ಮಾತುಗಳನ್ನು ಆಡಿಲ್ಲ. ವಿವಾದವನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಸಾಮ ಮಾರ್ಗದಲ್ಲಿ ಇತ್ಯರ್ಥ ಗೊಳಿಸಬೇಕೆಂಬುದು ಸರ್ಕಾರದ ನಿಲುವೂ ಆಗಿದೆ.

ಯತ್ನಾಳ್‌ ಭವಿಷ್ಯವೇನು?
ಸಂಪುಟದ ಸಹೋದ್ಯೋಗಿಗಳ ವಿಚಾರದಲ್ಲಿ ಯತ್ನಾಳ್‌ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆಯಾದರೂ ಅವರ ವಿರುದ್ಧ ಕಠಿನ ನಿರ್ಧಾರ ತೆಗೆದುಕೊಳ್ಳಲು ವರಿಷ್ಠರು ಕೂಡಾ ಸಿದ್ಧರಿಲ್ಲ. ಹೀಗಾಗಿ ಶಿಸ್ತುಕ್ರಮದ ವಿಚಾರದಲ್ಲೂ ಅವಸರದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಲಿಂಗಾಯಿತ ಸಮುದಾಯದ ನಾಯಕತ್ವ ವಿಚಾರವೂ ಇಲ್ಲಿ ಅಡಕವಾಗಿದೆ. ಅಲ್ಲದೆ, ಯತ್ನಾಳ್‌ ಅವ ರಿಗೆ ಸಮುದಾಯದ ಬೆಂಬ ಲವೂ ಇದೆ. ಜತೆಗೆ ಇನ್ನೂ 10 ವರ್ಷಗಳ ಕಾಲ ಅವರನ್ನು ಪಕ್ಷ ದುಡಿಸಿಕೊಳ್ಳುವುದಕ್ಕೆ ಅವಕಾಶವಿದೆ. ಈ ಕಾರಣಕ್ಕಾ ಗಿಯೇ ಸದ್ಯಕ್ಕೆ ಸುಮ್ಮನಿರಿ ಎಂಬ ಸಂದೇಶವನ್ನು ಯತ್ನಾಳ್‌ಗೆ ರವಾನಿಸಲಾಗಿದೆ.

ಕಾಂಗ್ರೆಸ್‌ನ್ನು ಪ್ರಶ್ನಿಸಿ
ಪಂಚಮಸಾಲಿ ಮೀಸಲು ವಿಚಾರದಲ್ಲಿ ಕೇವಲ ಬಿಜೆಪಿಯನ್ನು ಮಾತ್ರ ಪ್ರಶ್ನಿಸುವುದು ಸರಿಯಲ್ಲ ಎಂದು ಬಿಜೆಪಿ ನಾಯಕರು ಸ್ವಾಮೀಜಿಗಳು ಹಾಗೂ ಸಮುದಾಯದ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿ ದ್ದಾರೆ. ಅಷ್ಟಕ್ಕೂ ಸರ್ಕಾರ ಈ ವಿಚಾರವನ್ನು ಕೈ ಬಿಟ್ಟಿಲ್ಲ. ಈಗ ಸಲ್ಲಿಕೆ ಯಾಗಿರುವುದು ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿ ಮಾತ್ರ. ಅದನ್ನು ಆಧರಿಸಿ ಸರಕಾರ ತೆಗೆದುಕೊಂಡ ನಿಲುವಿಗೆ ಹೈಕೋರ್ಟ್‌ ತಡೆ ನೀಡಿದೆ. ಆದರೆ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ವಲಯದಲ್ಲಿ ತಾತ್ವಿಕ ವಿರೋಧವೂ ಇದೆ. ಇದರ ಬಗ್ಗೆಯೂ ಹೋರಾಟಗಾರರು ಗಮನಿಸಬೇಕೆಂಬ ಸಲಹೆ ಈಗ ವ್ಯಕ್ತವಾಗಿದೆ.

-ರಾಘವೇಂದ್ರ ಭಟ್‌