ಹುಬ್ಬಳ್ಳಿ: ಆನೆ ದಂತ ಕಲಾಕೃತಿ ಮಾರಾಟ ಮಾಡುತ್ತಿದ್ದ 5 ದಂತ ಚೋರರ ಬಂಧನ

ಹುಬ್ಬಳ್ಳಿ: ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ವಿಶೇಷ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಐವರು ದಂತ ಚೋರರನ್ನು ವಶಕ್ಕೆ ಪಡೆದಿದ್ದಾರೆ.
ಎಡಿಜಿಪಿ ಸಿ.ಐ.ಡಿ ಬೆಂಗಳೂರು ಮತ್ತು ಪ್ರಭಾರ ಡಿ.ಐ.ಜಿ.ಪಿ ಸಿಐಡಿ ಅರಣ್ಯ ಘಟಕ ಬೆಂಗಳೂರು ಹಾಗೂ ಪೊಲೀಸ್ ಉಪಾಧೀಕ್ಷಕರು ಸಿಐಡಿ ಅರಣ್ಯ ಘಟಕ ಹುಬ್ಬಳ್ಳಿ ವಿಭಾಗರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರ ಅರಣ್ಯ ಇಲಾಖೆಯು ಐವರನ್ನು ವಶಕ್ಕೆ ಪಡೆದಿದ್ದು, ಲಕ್ಷಾಂತರ ಮೌಲ್ಯದ ಆನೆ ದಂತದ ಕಲಾಕೃತಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೊಲ್ಲಾಪೂರ ಮೂಲದ ಸಾತ್ ಶಹಾಜನ್ ಜಮಾದಾರ, ವಿಜಯ್ ರಾಜಾರಾಂ ಕುಂಬಾರ, ಸಾಗರ ಸುಭಾಷ ಪರಾಣಿಕ, ನಿಪ್ಪಾಣಿ ಮೂಲದ ವಿನಾಯಕ ನಾಮದೇವ ಕಾಂಬ್ಳೆ, ದಾನಜೀ ಪಾಂಡುರಂಗ ಪಾಟೀಲ ಎಂಬುವವರೇ ಬಂಧಿತ ಆರೋಪಿಗಳು. ಅಕ್ರಮವಾಗಿ ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿತರನ್ನು ಬಂಧಿಸಿ ಅವರ ವಶದಲ್ಲಿದ್ದ 384 ಗ್ರಾಂ ತೂಕದ ಆನೆಯ ದಂತದಿಂದ ತಯಾರಿಸಿದ ಅಲಂಕಾರಿಕ ಪಟ್ಟಿಗೆ, 112 ಗ್ರಾಂ ತೂಕದ ಆನೆಯ ದಂತದಿಂದ ತಯಾರಿಸಿದ ಕೆಂಪು ಹರಳು, ಇರುವ ಒಂದು ಖಡ್ಗ, 350 ಗ್ರಾಂ ತೂಕದ ಆನೆಯ ದಂತದಿಂದ ಮಾಡಿದ ಒಂದು ಆಯತಾಕಾರದ ಪೆಟ್ಟಿಗೆ, 279 ಗ್ರಾಂ ತೂಕದ ಆನೆಯ ದಂತದಿಂದ ಮಾಡಿದ ಒಂದು ಮೊಟ್ಟೆಯಾಕಾರದ ಪೆಟ್ಟಿಗೆಯನ್ನು ವಶಕ್ಕೆ ಪಡೆದಿದ್ದಾರೆ.
ಇನ್ನೂ ಆರೋಪಿತ ಸಾತ್ ಶಹಜಾನ ಜಮಾದಾರ ಇತನಿಗೆ ವಿಚಾರಣೆ ಒಳಪಡಿಸಿದಾಗ ಇವುಗಳನ್ನು ತನ್ನ ತಂದೆಯವರಾದ ಶಹಜಾನ ಜಮಾದಾರ ರಾಜಸ್ಥಾನದಲ್ಲಿ ನಡೆಯುವ ಜಾತ್ರೆಗಳು ಸಂತೆಗಳು ಸಾಧುಸಂತರ ಬಳಿಯಿಂದ ಅನೇಕ ವರ್ಷಗಳ ಹಿಂದೆ ಸಂಗ್ರಹಿಸಿ ಮನೆಯಲ್ಲಿಟ್ಟಿದ್ದರು. ಅವುಗಳನ್ನು ಮಾರಾಟ ಮಾರಿದರೆ ಸಾಕಷ್ಟು ದುಡ್ಡು ಬರಬಹುದು ಅಂತಾ ತಿಳಿದು ನಾವು ಇಲ್ಲಿಗೆ ಮಾರಾಟ ಮಾಡಲು ಬಂದಿರುವುದಾಗಿ ಬಾಯಿ ಬಿಟ್ಟಿದ್ದಾರೆ.
ಆರೋಪಿತರ ವಿರುದ್ಧ 01/2023 ಕಲಂ 9,39,40, 48 (A)49(B), 50,51,55 R/W ಶೆಡ್ಯೂಲ್ (1) ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆದ ಪ್ರಸಾದ ಪಣೇಕರ್ ಹಾಗೂ ಸಿಬ್ಬಂದಿಗಳಾದ ಎಲ್.ಎ ಪಾಠಕ, ಅಶೋಕ ನಾಗರಹಳ್ಳಿ, ರವೀಂದ್ರ ಗೋಣೆನವರ, ಎಸ್.ಎಚ್. ಹುಲಗೇರ ಹಾಗೂ ದಿವ್ಯ ಎಸ್ ನಾಯ್ಕ ಅವರ ಕಾರ್ಯಕ್ಕೆ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.