ಕೆಂಪೇಗೌಡರ ಪ್ರತಿಮೆ ರಾಜ್ಯದ ಹೆಗ್ಗುರುತು: ಅಶ್ವತ್ಥನಾರಾಯಣ

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆಯು ರಾಜ್ಯದ ಹೆಗ್ಗುರುತಾಗಲಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿನ 23 ಎಕರೆ ವಿಸ್ತೀರ್ಣದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ಹಾಗೂ ₹64 ಕೋಟಿ ವೆಚ್ಚದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯು ಮುಂದಿನ ದಿನಗಳಲ್ಲಿ ವಿಶೇಷ ಆಕರ್ಷಣೆಯ ಕೇಂದ್ರವಾಗಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.
'ಪ್ರಜಾವಾಣಿ' ಕಚೇರಿಗೆ ಗುರುವಾರ ಭೇಟಿ ನೀಡಿದ್ದ ಅವರು, ಈ ಯೋಜನೆಯ ವಿವರಗಳನ್ನು ಹಂಚಿಕೊಂಡರು.
'ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂಬ ಉದ್ದೇಶ ಹಿಂದಿನ ಸರ್ಕಾರಗಳಿಗೆ ಇದ್ದರೂ ಎಲ್ಲಿ ನಿರ್ಮಿಸಬೇಕು ಎಂಬುದು
ತೀರ್ಮಾನವಾಗಿರಲಿಲ್ಲ. ನಮ್ಮ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬಳಿ ಈ ಪ್ರಸ್ತಾವನೆ ಮುಂದಿಟ್ಟಾಗ, ಒಪ್ಪಿಗೆ ಕೊಟ್ಟ ಅವರು ಜವಾಬ್ದಾರಿಯನ್ನೂ ವಹಿಸಿದರು. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಥೀಮ್ ಪಾರ್ಕ್ ನಿರ್ಮಿಸುವುದಕ್ಕೆ ಅನುಮೋದನೆ ಕೊಟ್ಟರು' ಎಂದರು.
'ನಿರ್ಮಾಣ ಗೊಂಡಿರುವ ಕೆಂಪೇಗೌಡರ ಪ್ರತಿಮೆಯಲ್ಲಿ ಖಡ್ಗವು ಒರೆಯಿಂದ ಹೊರಗೆ ಬಂದ ಸ್ಥಿತಿಯಲ್ಲಿ ಇದೆ. ಎತ್ತಿನ ಬಂಡಿಯ ಪರಿಕಲ್ಪನೆ
ಯನ್ನೂ ಅಲ್ಲಿ ಅಳವಡಿಸಿದ್ದೇವೆ. ಭೂದೃಶ್ಯಗಳಲ್ಲಿ ಕೆಂಪೇಗೌಡರು ಕೆರೆ ಕಟ್ಟೆಗಳನ್ನು ನಿರ್ಮಿಸಿರುವುದಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದೇವೆ. ಆರೇಳು ತಿಂಗಳಿನಲ್ಲಿ ಥೀಮ್ ಪಾರ್ಕ್ ಕಾಮಗಾರಿಗಳು ಮುಗಿಯಲಿವೆ' ಎಂದರು.
'ಆಧುನಿಕ ತಂತ್ರಜ್ಞಾನದ ಆವಿಷ್ಕಾರವಾಗಿರುವ ಮೆಟಾವರ್ಸ್ ಅನ್ನೂ ಈ ಯೋಜನೆಯಡಿ ಅಳವಡಿಸಲಿದ್ದೇವೆ. ಅದು ವರ್ಚುಯಲ್ ಅನುಭವವನ್ನು ನೀಡುತ್ತದೆ. ಆ ತಂತ್ರಜ್ಞಾನದ ಮೂಲಕ
ಕೆಂಪೇಗೌಡರನ್ನು ನಿಜರೂಪದಲ್ಲಿಯೇ ಕಾಣಬಹುದು. ವಿಮಾನಗಳು ಗಗನಕ್ಕೆ ಚಿಮ್ಮುವಾಗ ಹಾಗೂ ಭೂಮಿಗೆ ಇಳಿಯುವಾಗ ಈ ಬೃಹತ್ ಪ್ರತಿಮೆಯು ಕಾಣುತ್ತದೆ' ಎಂದು ಅವರು ವಿವರಿಸಿದರು.
'ದೆಹಲಿ, ಮುಂಬೈಗಳನ್ನು ಹಿಂದಿಕ್ಕಿ ಬೆಂಗಳೂರು ಬೆಳೆದಿದೆ. 2047ಕ್ಕೆ ನಾವು ಏನು ಸಾಧನೆ ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯನ್ನು ಸಾಧಿಸುವ ದಾರಿಯಲ್ಲಿ ನಾವಿದ್ದೇವೆ. ಎಲ್ಲ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಸ್ಥೆಗಳು ಇಲ್ಲಿವೆ. ನಾವು ಇನ್ನಷ್ಟು ಪ್ರಯತ್ನಿಸಿದರೆ, ಕರ್ನಾಟಕ ಮಹತ್ವದ ಮೈಲಿಗಲ್ಲು ಸಾಧಿಸಲಿದೆ. ಈ ಕಾರಣಕ್ಕಾಗಿ ಕೆಂಪೇಗೌಡರ ಪ್ರತಿಮೆಗೆ ಪ್ರಗತಿಯ ಪ್ರತಿಮೆ ಎಂಬ ಹೆಸರು ಇಡಲಾಗಿದೆ' ಎಂದರು.