ಕುದುರೆಮುಖ ಉದ್ಯಾನವನ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು: ಬೆಂಕಿ ನಿಯಂತ್ರಣ ಕಾರ್ಯಾಚರಣೆ

ಕುದುರೆಮುಖ ಉದ್ಯಾನವನ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು: ಬೆಂಕಿ ನಿಯಂತ್ರಣ ಕಾರ್ಯಾಚರಣೆ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹಬ್ಬಿದ ಕಾಡ್ಗಿಚ್ಚಿನ ಪರಿಣಾಮ ನದಿ, ಹೊಳೆಗಳಲ್ಲಿ ಧಿಡೀರನೆ ನೀರಿನ ಪ್ರಮಾಣ ಕಡಿಮೆಯಾಗಿರುವುದು ಕಂಡು ಬಂದಿದೆ. ಇನ್ನೊಂದೆಡೆ ಬೆಂಕಿ ಹತೋಟಿಗೆ ಹರಸಾಹಸ ನಡೆಯುತ್ತಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾ ನವನ( ದ ಕುದುರೆಮುಖ ಕಡೆಯಿಂದ ಅಳದಂಗಡಿಯ ಊರ್ಜಾಲುಬೆಟ್ಟ , ಹೂವಿನಕೊಪ್ಪಲು ಅರಣ್ಯದ ಹುಲ್ಲುಗಾವಲು ಪರಿಸರವನ್ನು ವ್ಯಾಪಿಸಿರುವ ಬೆಂಕಿ ಹತೋಟಿಗೆ ತರಲು ವನ್ಯಜೀವಿ ವಿಭಾಗ ಹರಸಾಹಸ ನಡೆಸುತ್ತಿದೆ. ಬೆಂಕಿ ಕಾಣಿಸಿ ಕೊಂಡಿರುವ ಪ್ರದೇಶ ಕುದುರೆಮುಖಕ್ಕೆ ಸಮೀಪವಾದರೂ ಅದು ಬೆಳ್ತಂಗಡಿ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿದೆ. ಬೆಂಕಿ ಬಿದ್ದಿರುವ ಪ್ರದೇಶಕ್ಕೆ ಏಳೆಂಟು ಕಿಮೀ. ದೂರವನ್ನು ತಂಡವು ಟ್ರಕ್ಕಿಂಗ್ ಮೂಲಕ ಪಯಣಿಸಬೇಕು.

ಇಲ್ಲಿ ಬೆಂಕಿ ಹತೋಟಿಗೆ ತರಲು ಪ್ರಯತ್ನ ನಡೆದಿದೆ. ಬೆಂಕಿ ಉಂಟಾಗಿರುವ ಪ್ರದೇಶಕ್ಕೆ ತೆರಳ ಬೇಕಾದರೆ ಗುಡ್ಡ, ಬೆಟ್ಟಹತ್ತಿ ಹೋಗಲು ಹಲವು ತಾಸು ಸಮಯಬೇಕು. ಇಂತಹ ದುರ್ಗಮ ಪ್ರದೇಶದಲ್ಲಿ ಬೆಂಕಿ ನಂದಿಸುವ ಕಾರ್ಯ ಭರದಿಂದ ನಡೆದಿದೆ.
ಕುದುರೆಮುಖ ಭಾಗದಿಂದ ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂಬು ದರ ಬಗ್ಗೆ ಸ್ಪಷ್ಟತೆ ಇಲ್ಲ. ಹುಲ್ಲುಗಾವಲು ವ್ಯಾಪ್ತಿಯ ಅಲ್ಲಲ್ಲಿ ಬೆಂಕಿ ಪಸರಿಸಿರುವ ಕುರಿತು ಮಾಹಿತಿ ಇದೆ. ಮಲವಂತಿಗೆ ಗ್ರಾಮದ ಕೊಲ್ಲಿ ಪ್ರದೇಶದಲ್ಲಿ, ಚಾರ್ಮಾಡಿ ಪರ್ಲಾಣಿ ಪರಿಸರ ಹಾಗೂ ಕೊಟ್ಟಿಗೆಹಾರ ವಿಭಾಗದ ಅಣ್ಣಪ್ಪ ಬೆಟ್ಟಸಮೀಪ ಉಂಟಾಗಿದ್ದ ಬೆಂಕಿಯನ್ನು ಪೂರ್ಣ ಪ್ರಮಾಣದಲ್ಲಿ ಹತೋಟಿಗೆ ತರಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಕಾರ್ಯಾಚರಣೆಯಲ್ಲಿ ವನ್ಯಜೀವಿ ವಿಭಾಗದ ಬೆಳ್ತಂಗಡಿ ಆರ್‌ಎಫ್ ಒ ಸ್ವಾತಿ, ಡಿಆರ್‌ಎಫ್‌ಒ ಕಿರಣ್ ಪಾಟೀಲ , ರಂಜಿತ್, ರವೀಂದ್ರ ಅಂಕಲಗಿ, ನಾಗೇಶ್, ಗಸ್ತು ಅರಣ್ಯ ಪಾಲಕರಾದ ಮಾರುತಿ, ರಾಜು, ಭರತೇಶ್, ರಾಘವೇಂದ್ರ, ಪಾಂಡುರಂಗ ಕಮತಿ, ಸ್ಥಳೀಯರು ಸೇರಿ ೫೦ಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ.

ಹುಲ್ಲಿಗೆ ಹಿಡಿದ ಬೆಂಕಿ: ಹುಲ್ಲುಗಾವಲು ಪ್ರದೇಶದಲ್ಲೇ ಪಸರಿಸಿರುವ ಬೆಂಕಿ ಬಹಳ ವೇಗವಾಗಿ ವ್ಯಾಪಿಸುತ್ತಿದೆ. ಇಂತಹ ಕಡೆ ಇದನ್ನು ಹತೋಟಿಗೆ ತರುವುದು ಸುಲಭವಲ್ಲ.ಒಂದು ಕಡೆ ಬೆಂಕಿ ಆರಿದರೆ ಇನ್ನೊಂದು ಕಡೆಯಿಂದ ಬೆಂಕಿ ಹಿಡಿಯುತ್ತದೆ. ಆದರೆ ಕೆಲವೆಡೆ ಬೆಂಕಿ ರೇಖೆ ನಿರ್ಮಿಸಿರುವುದು ಹೆಚ್ಚಿನ ಹತೋಟಿಗೆ ಸಾಧ್ಯವಾಗಿದೆ ಎಂದು ಇಲಾಖೆ ತಿಳಿಸಿದೆ. ಒಣ ಹುಲ್ಲಿಗೆ ಬೆಂಕಿ ಹಿಡಿದಿರುವ ಕಾರಣ ಮರಮಟ್ಟುಗಳಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಆದರೆ ಬೆಂಕಿ ಇನ್ನಷ್ಟುಪಸರಿಸುತಿದ್ದರೆ ಮರಮಟ್ಟುಗಳು ನಾಶವಾಗುವ ಸಾಧ್ಯತೆ ಇತ್ತು. ವನ್ಯಜೀವಿ ವಿಭಾಗದ ಸಕಾಲಿಕ ಕೆಲಸದಿಂದ ಬೆಂಕಿ ಕಾಡಿಗೆ ಪಸರಿಸುವುದು ತಪ್ಪಿದೆ.

ವನ್ಯಜೀವಿ ಗಳಿಗೆ ಸಂಕಷ್ಟ: ಬೆಂಕಿಯಿಂದ ಅರಣ್ಯದಲ್ಲಿ ವಾಸಿಸುವ ಅನೇಕ ವನ್ಯಜೀವಿಗಳಿಗೆ ಸಂಕಷ್ಟಬಂದೊ ದಗುತ್ತದೆ ಕೆಲವು ಸರೀಸೃಪಗಳು ನಾಶವಾಗಿರುವ ಸಾಧ್ಯತೆಯೂ ಇದೆ. ಬೆಂಕಿಯ ಶಾಖಕ್ಕೆ ಕಾಡಿನಲ್ಲಿದ್ದ ಪ್ರಾಣಿಗಳು ನಾಡಿನತ್ತ ಬರುವ ಸಾಧ್ಯತೆಯೂ ಇದೆ. ಇದಕ್ಕೆ ಪೂರಕ ಎಂಬಂತೆ ರಾತ್ರಿ ಮಲವಂತಿಗೆ ಸಮೀಪದ ಕಡಿರುದ್ಯಾವರ ಗ್ರಾಮದ ಎರ್ಮಾಲ್ ಪಲ್ಕೆ ಪರಿಸರದಲ್ಲಿ ಕಾಡಾನೆಗಳು ಘೀಳಿಡುವ ಸದ್ದು ಕೇಳಿ ಬಂದಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.

ಆಧುನಿಕ ತಂತ್ರಜ್ಞಾನವಿಲ್ಲ: ಧಗಧಗನೇ ಉರಿಯುವ ಕಾಡ್ಗಿಚ್ಚನ್ನು ಹತೋಟಿಗೆ ತರಲು ಇಲಾಖೆ ಇಂದಿಗೂ ಕತ್ತಿ, ಕೋಲು, ಸೊಪ್ಪುಗಳ ಹಳೆ ಪದ್ಧತಿಯನ್ನು ಬಳಸುತ್ತಿದೆ, ವಿನಾ ಯಾವುದೇ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿಲ್ಲ. ಬೆಂಕಿ ನಂದಿಸುವ ಕಾರ್ಯಕ್ಕೆ ಸಿಬ್ಬಂದಿಗೆ ಬೇಕಾದ ಶೂ, ಜಾಕೆಟ್, ಬೆಂಕಿ ರಕ್ಷಕ ವ್ಯವಸ್ಥೆಗಳು ಇಲ್ಲ. ಅರಣ್ಯ ಪ್ರದೇಶದಲ್ಲಿ ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಅರಣ್ಯ ಪ್ರದೇಶದ ಮುಖ್ಯ ರಸ್ತೆಗಿಂತ ಹಲವು ಕಿಮೀ ದೂರದಲ್ಲಿ ಬೆಂಕಿ ಕಾಣಿಸಿಕೊಂಡರೆ ಅಲ್ಲಿ ಯಾವುದೇ ವಾಹನ ಅಥವಾ ಅಗ್ನಿಶಾಮಕ ದಳವು ಹೋಗಲು ಸಾಧ್ಯವಿಲ್ಲ. ಸಿಬ್ಬಂದಿ ಕಾಲ್ನಡಿಗೆ ಮೂಲಕವೇ ತೆರಳ ಬೇಕಾಗಿದ್ದು ಅವರು ತಲುಪುವಾಗ ಬೆಂಕಿ ಸಾಕಷ್ಟುಪರಿಸರವನ್ನು ಪಸರಿಸುತ್ತದೆ.