ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಟಿಕೆಟ್ ಬೇಕಾ?; ಇ-ಮೇಲ್ ಮಾಡಿ

ಭಾನುವಾರ ಟ್ವೀಟ್ ಮಾಡಿರುವ ಜನಾರ್ದನ ರೆಡ್ಡಿ ಪಕ್ಷದ ಟಿಕೆಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಸಹ ಅವರು ಬಿಡುಗಡೆ ಮಾಡಿದ್ದಾರೆ.
ಜನಾರ್ದನ ರೆಡ್ಡಿ ಗುರುವಾರ ಕೊಪ್ಪಳದಲ್ಲಿ ಸಿರಗುಪ್ಪ, ಕನಕಗಿರಿ, ನಾಗಠಾಣ, ಸಿಂಧನೂರು, ಹಿರಿಯೂರು ವಿಧಾನಸಭಾ ಕ್ಷೇತ್ರಗಳಿಗೆ ಈ ಬಾರಿಯ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ.
ಟಿಕೆಟ್ ಹಂಚಿಕೆ ಕುರಿತು ಮಾತನಾಡಿರುವ ಅವರು, "ಅವರು ಗೆಲ್ಲುತ್ತಾರೆ ಎಂಬ ನಂಬಿಕೆಯೊಂದಿಗೆ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ಸಮೀಕ್ಷೆ ಮಾಡಿಸಿ, ಗೆಲ್ಲುವ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದೇವೆ. ನಾನು ಒಂದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ" ಎಂದು ಸ್ಪಷ್ಟಪಡಿಸಿದರು.
ಭಾನುವಾರ ಟ್ವೀಟ್ ಮಾಡಿರುವ ಜನಾರ್ದನ ರೆಡ್ಡಿ, 'ಕಳಕಳಿಯ ಮನವಿ ಆತ್ಮೀಯರೇ, ಕಳೆದ ಡಿಸೆಂಬರ್ 25ರಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆಯಾದ ಮೇಲೆ ನಾಡಿನ ಎಲ್ಲೆಡೆ ಸಿಗುತ್ತಿರುವ ಅಭೂತಪೂರ್ವ ಬೆಂಬಲಕ್ಕೆ ನಾನು ಚಿರಋಣಿಯಾಗಿದ್ದೇನೆ' ಎಂದು ಹೇಳಿದ್ದಾರೆ.
'ಕಲ್ಯಾಣ ರಾಜ್ಯದ ಹಲವಾರು ಕ್ಷೇತ್ರಗಳಿಂದ ಪಕ್ಷದ ಟಿಕೆಟ್ ಆಕಾಂಕ್ಷಿಗಳು ತಮ್ಮನೂರಾರು ಅಭಿಮಾನಿಗಳೊಂದಿಗೆ ದಿನನಿತ್ಯ ಆಗಮಿಸುತ್ತಿದ್ದು ಪಕ್ಷದ ಮೇಲೆ ತಾವು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ. ಆದರೆ ಬಂದವರ ಎಲ್ಲರೊಂದಿಗೆ ನಾನು ಹೆಚ್ಚಿನ ಸಮಯ ಕಳೆಯಲು ಆಗುತ್ತಿಲ್ಲ' ಎಂದು ತಿಳಿಸಿದ್ದಾರೆ.
ಟಿಕೆಟ್ ಆಕಾಂಕ್ಷಿಗಳು
ಜನಾರ್ದನ ರೆಡ್ಡಿ ತಮ್ಮ ಟ್ವೀಟ್‌ನಲ್ಲಿ, 'ದೂರದ ಊರುಗಳಿಂದ ಕಷ್ಟಪಟ್ಟು ಬರುತ್ತಿರುವವರಲ್ಲಿ ನನ್ನ ಕಳಕಳಿಯ ಮನವಿ ತಾವು ಯಾರು ಖುದ್ದಾಗಿ ನೂರಾರು ಜನರೊಂದಿಗೆ ಆಗಮಿಸುವುದು ಬೇಡ ಗಂಗಾವತಿಯ ನಿವಾಸದ ಹತ್ತಿರ ದಿನನಿತ್ಯ ಸಾವಿರಾರು ಸಂಖ್ಯೆಯ ಜನರು ಸೇರುತ್ತಿರುವುದು ಎಲ್ಲರೊಂದಿಗೆ ವೈಯಕ್ತಿಕವಾಗಿ ಮಾತನಾಡಲು ಆಗುತ್ತಿಲ್ಲ' ಎಂದು ಹೇಳಿದ್ದಾರೆ.
'ದಯವಿಟ್ಟು ಟಿಕೆಟ್ ಆಕಾಂಕ್ಷಿಗಳು ಕೆಳಗಿನ ಮೇಲ್ ಐಡಿಗೆ ತಮ್ಮ ವಿವರಗಳನ್ನು ಕಳುಹಿಸಿರಿ. ನಾನು ಈಗಾಗಲೇ ಕ್ಷೇತ್ರಗಳ ಸಮೀಕ್ಷೆಯನ್ನು ಮಾಡುತ್ತಿದ್ದೇನೆ ವರದಿಯ ಆಧಾರದ ಮೇಲೆ ಆಯಾ ಕ್ಷೇತ್ರಗಳಲ್ಲಿ ಸ್ಪರ್ಧೆ ಬಗ್ಗೆ ನಿರ್ಧರಿಸಿ ನಿಮ್ಮನ್ನು ಕರೆದು ಚರ್ಚಿಸುತ್ತೇನೆ ಅನ್ಯತಾ ಭಾವಿಸಬೇಡಿ ಗೌರವಗಳೊಂದಿಗೆ ತಮ್ಮ ವಿವರಗಳನ್ನು ಕೆಳಕಂಡ ಮೇಲ್ ಗೆ ಕಳುಹಿಸಿ' ಎಂದು contactatkrpp@gmail.com ಎಂಬ ಇ-ಮೇಲ್ ಐಡಿ ನೀಡಿದ್ದಾರೆ.
ಯಾರು, ಎಲ್ಲಿಂದ ಸ್ಪರ್ಧೆ?
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಬಳ್ಳಾರಿಯಿಂದ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಉಳಿದಂತೆ ಸಿರಗುಪ್ಪದಿಂದ ಧರೆಪ್ಪ ನಾಯಕ, ಕನಕಗಿರಿಯಿಂದ ಡಾ. ಚಾರುಲ್ ದಾಸರಿ, ನಾಗಠಾಣಾದಿಂದ ಶ್ರೀಕಾಂತ್, ಸಿಂಧನೂರು ಕ್ಷೇತ್ರದಿಂದ ನೆಕ್ಕಂಟಿ ಮಲ್ಲಿಕಾರ್ಜುನ, ಚಿತ್ರದುರ್ಗದ ಹಿರಿಯೂರು ಕ್ಷೇತ್ರದಿಂದ ಎಚ್. ಮಹೇಶ್ ಅಭ್ಯರ್ಥಿಯಾಗಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಿದೆ. ಪ್ರತಿ ವರ್ಷ ರೈತನ ಖಾತೆಗೆ 15 ಸಾವಿರ ರೂ. ಹಣ ಜಮಾ, ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಆಗಮಿಸಿ ಸಮಸ್ಯೆ ಆಲಿಸುವಂತೆ ಕ್ರಮ ಸೇರಿದಂತೆ ವಿವಿಧ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಡಿಸೆಂಬರ್ 25ರಂದು ಪಕ್ಷ ಘೋಷಣೆ
022ರ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, "ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಮುಂದೆ ಹೆಜ್ಜೆ ಹಾಕುತ್ತೇನೆ" ಎಂದು ಹೇಳಿದ್ದರು.
ಉತ್ತರ ಕರ್ನಾಟಕ ಭಾಗದಲ್ಲಿ ಜನಾರ್ದನ ರೆಡ್ಡಿ ಈಗಾಗಲೇ ಬಿರುಸಿನಿಂದ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ.