ಹಣ ವಾಪಸ್‌ ಕೊಡಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಹಣ ವಾಪಸ್‌ ಕೊಡಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಬೆಂಗಳೂರು: ದೇಶದ ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಇರಿಸಿ ಹಣ ಕಳೆದು ಕೊಂಡಿರುವ ಠೇವಣಿದಾರರಿಗೆ ಹಣ ವಾಪಸ್‌ ಕೊಡಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. ಈ ಯೋಜನೆ ಮೂಲಕ ಬೆಂಗಳೂರಿನ ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ನ ಸುಮಾರು 33 ಸಾವಿರ ಠೇವಣಿದಾರರು ಸೇರಿ ರಾಜ್ಯದ 77,819 ಠೇವಣಿದಾರರಿಗೆ ಯೋಜನೆಯ ಫ‌ಲಾನುಭವಿಗಳಾಗಲಿದ್ದಾರೆ.

ಗುರು ರಾಘವೇಂದ್ರ ಬ್ಯಾಂಕ್‌ ಜೊತೆಗೆ ರಾಜ್ಯದ ಬಾಗಲಕೋಟೆಯ ಮುಧೋಳ್‌ ಕೋ- ಆಪರೇಟೀವ್‌ ಬ್ಯಾಂಕ್‌, ವಿಜಯಪುರದ ಡೆಕ್ಕನ್‌ ಅರ್ಬನ್‌ ಕೋ- ಆಪರೇಟೀವ್‌ ಬ್ಯಾಂಕ್‌, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಿಲ್ಲಾತ್‌ ಕೋ- ಆಪರೇಟೀವ್‌ ಬ್ಯಾಂಕುಗಳ ಒಟ್ಟಾರೆ 77,819 ಠೇವಣಿದಾರರಿಗೆ ಮುಂದಿನ ದಿನಗಳಲ್ಲಿ ಹಣ ಮರುಪಾವತಿ ಮಾಡುವ ಭರವಸೆ ನೀಡಲಾಗಿದೆ.

ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ವರ್ಚುಯಲ್‌ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು. ಈ ಕಾರ್ಯಕ್ರಮಕ್ಕೆ ಬೆಂ.ನಗರ ಜಿಪಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ, ಪ್ರಧಾನಿಮಂತ್ರಿಗಳು ನೀಡಿರುವ ಯೋಜನೆಯಿಂದ ಲಕ್ಷಾಂತರ ಠೇವಣಿದಾರರಿಗೆ ಅನುಕೂಲವಾಗಲಿದೆ.

ಬೆಂಗಳೂರಿನ ಗುರು ರಾಘವೇಂದ್ರ ಬ್ಯಾಂಕಿನ 33 ಸಾವಿರ ಠೇವಣಿದಾರರ ಖಾತೆಗೆ 753.61 ಕೋಟಿ ರೂ. ಹಣವನ್ನು ಜಮೆ ಮಾಡಲಾಗಿದೆ ಎಂದು ತಿಳಿಸಿದರು. ದೇಶದ ವಿವಿಧ ಬ್ಯಾಂಕುಗಳಲ್ಲಿರುವ ಠೇವಣಿದಾರರ ಪೈಕಿ 1ರಿಂದ 5 ಲಕ್ಷ ರೂ. ವರೆಗಿನ ಠೇವಣಿಯಲ್ಲಿ ಶೇ.98.1ರಷ್ಟು ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಗುರು ರಾಘವೇಂದ್ರ ಬ್ಯಾಂಕ್‌ ಜೊತೆಗೆ ರಾಜ್ಯದ ಇನ್ನಿತರ ಬ್ಯಾಂಕುಗಳಲ್ಲಿ ಹಣ ಕಳೆದುಕೊಂಡಿರುವ ಠೇವಣಿದಾರರಿಗೂ ಹಣ ಮರುಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಗುರು ರಾಘವೇಂದ್ರ ಬ್ಯಾಂಕ್‌ ಜೊತೆಗೆ ರಾಜ್ಯದ ಇತರೆ ಬ್ಯಾಂಕುಗಳು ವಿಫ‌ಲವಾದ ನಂತರ ಕೇಂದ್ರ ಸರ್ಕಾರವು ಐದು ಲಕ್ಷ ರೂ.ಗಳ ವರೆಗಿನ ಹಣ ಬಿಡುಗಡೆ ಮಾಡಿದೆ ಎಂದು ತಿಳಿಸಿದರು. ಇದೇ ವೇಳೆ ಫ‌ಲಾನುಭವಿಗಳಿಗೆ ಚೆಕ್‌ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್‌, ಜಿಪಂ ಆಡಳಿತಾಧಿಕಾರಿ ಮಂಜುಳಾ, ಜಿಲ್ಲಾಧಿಕಾರಿ ಜೆ. ಮಂಜುನಾಥ್‌, ಜಿಲ್ಲಾ ಪಂಚಾಯ್ತಿ ಸಿಇಒ ಸಂಗಪ್ಪ ಸೇರಿದಂತೆ ಇತರೆ ಬ್ಯಾಂಕ್‌ ಅಧಿಕಾರಿಗಳು ಇತರರು ಪಾಲ್ಗೊಂಡಿದ್ದರು.