ಅಂದುಕೊಂಡತೆ ನಡೆದರೆ ಈ ತಿಂಗಳು ಮಂಡ್ಯಕ್ಕೆ ಬರಲಿದ್ದಾರೆ ಯು.ಪಿ. ಸಿ.ಎಂ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಸಂಘಟನಾ ಚಟುವಟಿಕೆ ತೀವ್ರಗೊಳಿಸಿರುವ ಬಿಜೆಪಿ ಇದೀಗ ಹಿಂದುತ್ವದ ಫೈಯರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಅವರನ್ನು ಕರೆಸಿ ಹಳೆ ಮೈಸೂರು ಭಾಗದಲ್ಲಿ ಕೇಸರಿ ಅಲೆ ಸೃಷ್ಟಿಸಲು ಮುಂದಾಗಿದೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಹಾದು ಹೋದ ಜಿಲ್ಲೆಗಳ ಮಧ್ಯ ಭಾಗದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕರೆಸಿ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳಲ್ಲಿ ಹಿಂದುತ್ವದ ಅಜೆಂಡಾ ಬಡಿದ್ದೆಬ್ಬಿಸಲು ಚಿಂತನೆ ನಡೆಸಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳ 13,14,15 ರ ಪೈಕಿ ಒಂದು ದಿನ ಸಮಾವೇಶ ನಡೆಯುವುದಕ್ಕೆ ಸಿದ್ಧತೆ ನಡೆಯುತ್ತಿದೆ. ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಡಾ.ನಾರಾಯಣ ಗೌಡ ಈ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದಾರೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ವಿಧಾನ ಪರಿಷತ್ ಸದಸ್ಯ ಕೇಶವ್ ಪ್ರಸಾದ್ ನೇತೃತ್ವ ದಲ್ಲಿ ಈಗಾಗಲೇ ಕೆಲ ಪೂರ್ವ ಸಿದ್ಧತೆಗಳು ನಡೆದಿವೆ. ಯೋಗಿ ಆದಿತ್ಯನಾಥ ಅವರು ಆದಿಚುಂಚನಗಿರಿ ಮಠದಲ್ಲೇ ವಾಸ್ತವ್ಯವಾಗುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.