ಸೆ.26 ರಿಂದ ರೈತ ದಸರಾ : ವಿಶ್ವವಿಖ್ಯಾತ ದಸರಾದಲ್ಲಿ ಕೃಷಿಕರಿಗೆ ಆದ್ಯತೆ
ಮೈಸೂರು, ಸೆ.16- ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಸೆ.26ರಿಂದ 30ರ ವರೆಗೆ ತಾಲೂಕು ಮಟ್ಟದಲ್ಲಿ ಹಾಗೂ ಅ. 1ರಿಂದ 3ರ ವರೆಗೆ ಜಿಲ್ಲಾಮಟ್ಟದಲ್ಲಿ ರೈತ ದಸರಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜೆ.ಕೆ.ಮೈದಾನದವರೆಗೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಯಲಿದ್ದು, ಪೂಜಾ ಕುಣಿತ, ಕಂಸಾಳೆ, ಗಾಡಿಗೊಂಬೆ, ನಂದಿಧ್ವಜ, ಡೊಳ್ಳು ಕುಣಿತ, ನಗಾರಿ, ಕರಡಿ ಕುಣಿತ, ಕೊಂಬು ಕಹಳೆಗಳು ಇರಲಿದ್ದು, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಬೆಳಿಗ್ಗೆ 9.30ಕ್ಕೆ ಉದ್ಘಾಟನೆ ನೆರವೇರಿಸಲಿದ್ದಾರೆ.
ಜೆ.ಕೆ.ಮೈದಾನದಲ್ಲಿ ಕೃಷಿ ಸಂಬಂತ ವಸ್ತುಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 10.30ಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಕೃಷಿ ಮತ್ತು ಕೃಷಿ ಸಂಬಂತ ಇಲಾಖೆಗಳಿಂದ 30 ಮಳಿಗೆಗಳು, ಪಶುಪಾಲನಾ ಇಲಾಖೆಯಿಂದ 15ಸ್ಟಾಲ್‍ಗಳಲ್ಲಿ ವಿವಿಧ ರೀತಿಯ ಪಶು/ಸಾಕು ಪ್ರಾಣಿಗಳ ಪ್ರದರ್ಶನ, ಮತ್ಸ್ಯಮೇಳ, ಮೀನುಗಾರಿಕೆ ಇಲಾಖೆಯಿಂದ ಅಲಂಕಾರಿಕ ಮೀನುಗಳ ಪ್ರದರ್ಶನ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ಆಲ್ಯೂಮಿನಿಯಂ ಅಸೋಸಿಯೇಷನ್ ಸಭಾಭವನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಚಿವ ಬಿ.ಸಿ.ಪಾಟೀಲ್ ಉದ್ಘಾಟಿಸಲಿದ್ದಾರೆ. ರೈತರು, ರೈತ ಮಹಿಳೆಯರು, ವಿಜ್ಞಾನಿಗಳು, ಯುವ ರೈತರು ಮತ್ತು ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತರನ್ನು ಸನ್ಮಾನಿಸಲಾಗುತ್ತದೆ. 12.30ಕ್ಕೆ ರೈತರೊಂದಿಗೆ ವಿಚಾರ ವಿನಿಮಯ, ಸಮಗ್ರ ಕೃಷಿ ಪದ್ಧತಿಯಿಂದ ಸ್ವಾವಲಂಬಿ ಕೃಷಿ, ಕೃಷಿಯಲ್ಲಿ ಖುಷಿಕಂಡ ರೈತ ದಂಪತಿಗಳು ಕೃಷಿ ಅನುಭವ ಹಂಚಿಕೊಳ್ಳಲಿದ್ದಾರೆ.
ಎರಡನೇ ದಿನ ರೈತ ದಸರಾ ಕ್ರೀಡಾಕೂಟ/ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 9ಗಂಟೆಗೆ ಸಿದ್ದಲಿಂಗಪುರದಲ್ಲಿ ಕೆಸರುಗದ್ದೆ ಓಟ, ಬೆಳಿಗ್ಗೆ 10ಗಂಟೆಗೆ ಓವಲ್ ಮೈದಾನದಲ್ಲಿ ಗೋಣಿಚೀಲದೊಳಗೆ ಕಾಲಿಟ್ಟು ಓಡುವುದು, 10.30ಕ್ಕೆ ಓವಲ್ ಮೈದಾನದಲ್ಲಿ ಗೊಬ್ಬರ ಮೂಟೆ ಹೊತ್ತು ಓಡುವುದು, 11ಗಂಟೆಗೆ ಮೂರು ಕಾಲಿನ ಓಟ ನಡೆಯಲಿದೆ.
ರೈತ ಮಹಿಳೆಯರಿಗಾಗಿ ಬೆಳಿಗ್ಗೆ 11 ಗಂಟೆಗೆ ಸಿದ್ದಲಿಂಗಪುರದಲ್ಲಿ ಕೆಸರುಗದ್ದೆ ಓಟ, 12ಗಂಟೆಗೆ ಓವಲ್ ಮೈದಾನದಲ್ಲಿ ನೀರಿನ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ, 12.30ಕ್ಕೆ ಓವಲ್ ಮೈದಾನದಲ್ಲಿ ಗೋಣಿಚೀಲದೊಳಗೆ ಕಾಲಿಟ್ಟು ಓಡುವುದು, 1ಗಂಟೆಗೆ ಓವಲ್ ಮೈದಾನದಲ್ಲಿ ಒಂಟಿಕಾಲಿನ ಓಟ, ಬೆಳಿಗ್ಗೆ 5.30 ಮತ್ತು ಸಂಜೆ 6.30ಕ್ಕೆ ಓವಲ್ ಮೈದಾನದಲ್ಲಿ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ, ಸಂಜೆ 6.30ಕ್ಕೆ ಓವಲ್ ಮೈದಾನದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಲಿದೆ ಎಂದು ತಿಳಿಸಿದರು.
ಮೂರನೇ ದಿನ ಹಾಕಿ ಮೈದಾನದಲ್ಲಿ ಮುದ್ದುಪ್ರಾಣಿಗಳ ಪ್ರದರ್ಶನ ಸ್ಪರ್ಧೆ ನಡೆಯಲಿದ್ದು, ಸಂಜೆ 5.30ಕ್ಕೆ ಜೆ.ಕೆ.ಮೈದಾನದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಬಿ.ಚೌವ್ಹಾಣ್ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ.